ಗುಡ್ಡೆಹೊಸೂರು: ಇಲ್ಲಿನ ಬೊಳ್ಳೂರು ಗ್ರಾಮದ ಶ್ರೀ ವಿನಾಯಕ ಸೇವಾ ಸಮಿತಿಯವರು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನೆ ಕಾರ್ಯ ಮಹಾಪೂಜೆ ಬಳಿಕ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಕಾರ್ಯ ನಡೆಸಲಾಯಿತು.
ನಂತರ ಮಕ್ಕಳು, ಮಹಿಳೆ ಯರು, ವಯಸ್ಕರು ಸೇರಿದಂತೆ ನೂರಾರು ಮಂದಿ ಮೆರವಣಿಗೆ ಯಲ್ಲಿ ಭಾಗವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಎಸ್. ಭಾರತಿ ಸುರೇಂದ್ರ ಭಾಗವಹಿಸಿದ್ದರು. ಮಂಟಪವನ್ನು ಅಲ್ಲಿನ ವಿಶ್ವಕರ್ಮ ಇಂಡಸ್ಟ್ರೀಸ್‍ನ ಮಾಲೀಕ ಸುರೇಂದ್ರ ಆಚಾರ್ ತಮ್ಮ ಸ್ವಂತ ವಾಹನವನ್ನು ವಿಶಿಷ್ಟ ರೀತಿಯಲ್ಲಿ ವಿನ್ಯಾಸ ಮಾಡಿ ಅದಕ್ಕೆ ದೀಪಾಲಂಕಾರ ಅಳವಡಿಸಿ ಮನಸೆಳೆಯುವಂತೆ ಮಾಡಿದ್ದರು. ರಾತ್ರಿ ಬೊಳ್ಳೂರು ಗ್ರಾಮದ ಸಾರ್ವಜನಿಕ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.
ಗೋಣಿಕೊಪ್ಪ ವರದಿ: ಪೊನ್ನಂಪೇಟೆ ಗೌರಿ-ಗಣೇಶೋತ್ಸವ ಸಮಿತಿ ವತಿಯಿಂದ ಗೌರಿ-ಗಣೇಶ ವಿಸರ್ಜನೋತ್ಸವ ನಡೆಯಿತು.
ಅಲ್ಲಿನ ಬಸವೇಶ್ವರ ದೇವಸ್ಥಾನ, ಕಾರು ನಿಲ್ದಾಣ, ಡೋಬಿ ಕಾಲೋನಿ, ಶಿವ ಕಾಲೋನಿ, ಕೃಷ್ಣ ಕಾಲೋನಿ ಹಾಗೂ ಕಾಟ್ರಕೊಲ್ಲಿಯ ಸಮಿತಿಗಳು ಪ್ರತಿಷ್ಠಾಪಿಸಿದ್ದ ಮೂರ್ತಿಗಳು ಪ್ರತ್ಯೇಕವಾಗಿ ಪಟ್ಟಣಕ್ಕೆ ಆಗಮಿಸಿದವು. ನಂತರ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು. ಆರ್ಕೆಸ್ಟ್ರಾ ಇಲ್ಲದಿದ್ದರೂ ಹೆಚ್ಚಿನ ಸಂಖ್ಯೆ ಭಕ್ತಾದಿಗಳು ಸೇರಿದ್ದರು. ಸಮೀಪದ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.