ಸೋಮವಾರಪೇಟೆ,ಸೆ.27: ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಪೊಲೀಸ್ ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನದಲ್ಲಿದ್ದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ಅವರಿಗೆ ಹೈಕೋರ್ಟ್ ಜಾಮೀನು ನೀಡಿದೆ.
ಆರೋಪಿಯ ಪರವಾಗಿ ವಕೀಲ ಎ.ಕೆ.ಸುಬ್ಬಯ್ಯ ಅವರು ಹೈಕೋರ್ಟ್‍ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ದ್ವಿ ಸದಸ್ಯ ಪೀಠದ ನ್ಯಾಯಾಧೀಶರು ಬುಧವಾರ ನಿರ್ವಾಣಪ್ಪ ಅವರಿಗೆ ಜಾಮೀನು ನೀಡಿದೆ.
ಸೋಮವಾರಪೇಟೆ ಠಾಣಾಧಿಕಾರಿ ಶಿವಣ್ಣ ಹಾಗೂ ನ್ಯಾಯಾಂಗ ಬಂಧನಕ್ಕೆ ಆದೇಶ ಮಾಡಿದ ತಹಶೀಲ್ದಾರ್ ಗೋವಿಂದರಾಜು ಅವರ ಆದೇಶದ ಕುರಿತು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಮಾನಸಿಕ ಹಿಂಸೆ ನೀಡಿದ ಆರೋಪದಲ್ಲಿ ಅರ್ಜಿದಾರರ 2 ಲಕ್ಷ ರೂ.ಗಳ ಪರಿಹಾರದ ಬೇಡಿಕೆಯನ್ನು ನ್ಯಾಯಾಧೀಶರು ಪರಿಗಣಿಸಿ ಪರಿಹಾರಕ್ಕೆ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸುವಂತೆ ನಿರ್ವಾಣಪ್ಪ ಅವರಿಗೆ ಸೂಚಿಸಿದೆ.
ಸಂತ್ರಸ್ತರಿಗೆ ಜಾಮೀನು: ಕುಶಾಲನಗರದ ವಾಲ್ಮೀಕಿ ಭವನದಲ್ಲಿ ಕಳೆದ ತಾ. 19ರಂದು ತಾಲೂಕು ತಹಶೀಲ್ದಾರ್ ಮಹೇಶ್ ಅವರ ಮೇಲೆ ಸಂತ್ರಸ್ತರ ಕೇಂದ್ರದಲ್ಲಿದ್ದವರು ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ 15 ಮಂದಿಗೆ ಕುಶಾಲನಗರದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ತಹಶೀಲ್ದಾರ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆ ಪೊಲೀಸರು ಸಂತ್ರಸ್ತರ ಕೇಂದ್ರದಲ್ಲಿದ್ದ ಮಕ್ಕಂದೂರು ರಾಟೆಮನೆ ಕಾಲೋನಿಯ ಸಂಜೀವ, ವಸಂತ್‍ಕುಮಾರ್, ಸಿದ್ದು, ಅಣ್ಣಪ್ಪ, ಸಂಜು, ತಿಮ್ಮಪ್ಪ, ಮಂಜುನಾಥ್, ಪಿ.ಎಸ್.ಮಂಜುನಾಥ್, ಚಿತ್ರಾ, ನಿಷಾ, ಎಂ.ಎಂ. ಮೋಹನ್, ಆನಂದ, ಪಿ.ವಿ. ರೋಷನ್, ಕಡಗದಾಳುವಿನ ಸಿ.ಕೆ. ತೇಜ್‍ಕುಮಾರ್, ಹಾಲೇರಿ ತಾತಿಬಾಣೆ ಪೈಸಾರಿಯ ಆದೀಶ್‍ಕುಮಾರ್ ಅವರುಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ, ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದರು.
ವಕೀಲ ಕೆ.ಎಸ್. ಪದ್ಮನಾಭ ಅವರು ಆರೋಪಿಗಳ ಪರ ವಕಾಲತ್ತು ವಹಿಸಿದ್ದು, ನ್ಯಾಯಾಧೀಶರಾದ ನಟರಾಜ್ ಅವರು ನಿನ್ನೆ ಜಾಮೀನು ಮಂಜೂರು ಮಾಡಿದ್ದಾರೆ. ನಿನ್ನೆ ರಾತ್ರಿ 8 ಗಂಟೆಗೆ ಆರೋಪಿಗಳು ನ್ಯಾಯಾಂಗ ಬಂಧನದಿಂದ ಹೊರಬಂದಿದ್ದಾರೆ.