ಕೂಡಿಗೆ, ಸೆ. 27: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘವು ಕುಟುಂಬ ವಿದ್ದಂತೆ. ಕುಟುಂಬದ ಸುಖ-ದುಃಖಗಳಲ್ಲಿ ಸದಸ್ಯರೆಲ್ಲರೂ ಭಾಗಿಯಾಗಿ ಅವುಗಳಿಗೆ ಸ್ಪಂದನ ನೀಡಬೇಕು. ಸಂಘದಲ್ಲಿಯೂ ಒಟ್ಟಾಗಿ ಒಗ್ಗಟ್ಟಿನಿಂದ ಸಲಹೆಗಳನ್ನು ಪಡೆದುಕೊಂಡು ಸಂಘವನ್ನು ಬೆಳೆಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾ ಧಿಕಾರಿ ಪ್ರಕಾಶ್ ವೈ ಹೇಳಿದರು.

ಕೂಡುಮಂಗಳೂರಿನಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೂಡಿಗೆ ವಲಯದ ವಿಜಯನಗರ ಒಕ್ಕೂಟದ ಸಭೆಯಲ್ಲಿ ಮಾತನಾಡಿದ ಅವರು, ಅತಿವೃಷ್ಟಿಯಿಂದ ಆಸ್ತಿ, ಮನೆ ಕಳೆದುಕೊಂಡ ಕೊಡಗಿನ 1000 ಕುಟುಂಬಗಳು ಹೊಸ ಬದುಕನ್ನು ಕಟ್ಟಿ ಕೊಳ್ಳಲು ಧರ್ಮಸ್ಥಳದ ಧರ್ಮಾಧಿ ಕಾರಿ ವೀರೇಂದ್ರ ಹೆಗ್ಗಡೆಯವರು ರೂ. 8 ಕೋಟಿ ಹಾಗೂ ಗ್ರಾಮಾಭಿವೃದ್ಧಿ ಯೋಜನೆ ಯಲ್ಲಿ ಕರ್ನಾಟಕ ರಾಜ್ಯಾದ್ಯಂತ ಕೆಲಸ ನಿರ್ವಹಿಸುತ್ತಿರುವ ಕಾರ್ಯಕರ್ತರು ತಮ್ಮ 3 ದಿನಗಳ ವೇತನದಿಂದ ರೂ. 2 ಕೋಟಿ ಒಟ್ಟು ರೂ. 10 ಕೋಟಿ ಸಹಾಯವನ್ನು ನೀಡಲಾಗಿದೆ. ನೀರಿನಿಂದ ಮುಳುಗಡೆ ಹೊಂದಿರುವ ಪ್ರದೇಶಗಳ ಸದಸ್ಯರುಗಳಿಗೆ ಹೊದಿಕೆ ಹಾಗೂ ಆಹಾರ ಸಾಮಗ್ರಿಗಳ ಪೂರೈಕೆಯನ್ನು ಮಾಡಲಾಗಿದ್ದು, ಸದಸ್ಯರೆಲ್ಲರೂ ತಮ್ಮನ್ನು ತಾವು ತೊಡಗಿಸಿಕೊಂಡು ಸಹಕರಿಸಿದಲ್ಲಿ ಸಂತ್ರಸ್ತ ಕುಟುಂಬಗಳಿಗೆ ಇನ್ನಷ್ಟು ಸಹಾಯ ನೀಡಲು ಸಾಧ್ಯವಾಗುತ್ತದೆ ಎಂದರು.

ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಮಾತನಾಡಿ, ಸಂಘದ ವ್ಯವಹಾರ ಬಗ್ಗೆ ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಜಯಮ್ಮ ವಹಿಸಿದ್ದರು. ವೇದಿಕೆಯಲ್ಲಿ ಸೇವಾ ಪ್ರತಿನಿಧಿ ಸುನೀತಾ ಹಾಗೂ ಒಕ್ಕೂಟದ ಪಧಾದಿಕಾರಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ 20 ಸಂಘಗಳ 90 ಸದಸ್ಯರುಗಳು ಭಾಗವಹಿಸಿ ಮಾಹಿತಿ ಪಡೆದುಕೊಂಡರು.