ಗೋಣಿಕೊಪ್ಪಲು, ಸೆ.25: ದ.ಕೊಡಗಿನ ವಿವಿಧ ಭಾಗದಲ್ಲಿರುವ ರೈತರು ಬೆಳೆದಿರುವ ಹಣ್ಣು ಹಂಪಲುಗಳಿಗೆ ಉತ್ತಮ ಬೆಲೆ ಲಭ್ಯವಾಗುತ್ತಿಲ್ಲ. ಸರ್ಕಾರದ ವತಿಯಿಂದ ‘ಹಾಪ್ ಕಾಮ್ಸ್’ ಕೇಂದ್ರವನ್ನು ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಆರಂಭಿಸಿದರೆ ರೈತರಿಗೆ ಅನುಕೂಲವಾಗಲಿದೆ. ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತದೆ ಎಂಬ ವಿಚಾರ ಪೊನ್ನಂಪೇಟೆ ಗ್ರಾಮಸಭೆಯಲ್ಲಿ ಪ್ರಸ್ತಾಪಗೊಂಡಿತು. ಗ್ರಾಮಸ್ಥರಾದ ಚೀರಂಡ ಕಂದಾ ಸುಬ್ಬಯ್ಯ ವಿಷಯ ಪ್ರ್ರಸ್ತಾಪಿಸಿದರು.

ಪೊನ್ನಂಪೇಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮೂಕಳೇರ ಸುಮಿತಾ ಗಣೇಶ್ ಅಧ್ಯಕ್ಷತೆಯಲ್ಲಿ 2018-19ನೇ ಸಾಲಿನ ಮೊದಲ ಗ್ರಾಮ ಸಭೆ, ಹಾಗೂ ಜಮಾಬಂದಿ ಸಭೆಯಲ್ಲಿ ಮಾತನಾಡಿದ ಕಂದಾ ಸುಬ್ಬಯ್ಯನವರ ಮಾತಿಗೆ ಗ್ರಾಮಸ್ಥರು ಒಕ್ಕೂರಲಿನ ಒಪ್ಪಿಗೆ ಸೂಚಿಸಿದರು.

ನಿಗದಿತ ಸಮಯಕ್ಕೆ ಸಭೆ ಆರಂಭಗೊಳ್ಳುತ್ತಿದ್ದಂತೆಯೇ ಕೃಷಿ ಇಲಾಖೆಯ ವತಿಯಿಂದ ಈ ಭಾಗದ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಹಕಾರ ವಾಗುತ್ತಿರುವದಕ್ಕೆ ಕೃಷಿ ಇಲಾಖೆಯ ಅಧಿಕಾರಿಗಳು ಮುಖ್ಯ ಕಾರಣ. ಯಾವದೇ ರೈತರು ಕಚೇರಿಗೆ ತೆರಳಿದಲ್ಲಿ ಅಲ್ಲಿಯ ಸಿಬ್ಬಂದಿಗಳು,ಅಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ. ಇದರಿಂದ ಇಲ್ಲಿಯ ಅಧಿಕಾರಿಗಳನ್ನು ಗ್ರಾಮಸ್ಥರು ಅಭಿನಂದಿಸಬೇಕೆಂದು ಗ್ರಾಮಸ್ಥರಾದ ಸಾಜಿ ಅಚ್ಚುತ್ತನ್, ಅಧಿಕಾರಿಯ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ಅನೇಕ ರೈತ ಮಿತ್ರರು ಧ್ವನಿ ಗೂಡಿಸಿದರು.

ತೋಟಗಾರಿಕಾ ಇಲಾಖೆಯಲ್ಲಿ ನೀಡುತ್ತಿರುವ ಗಿಡಗಳು ಗುಣಮಟ್ಟವಾಗಿಲ್ಲ ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರು ಪ್ರಯೋಜನವಾಗುತ್ತಿಲ್ಲ. ರೈತರಿಗೆ ಗುಣಮಟ್ಟದ ಗಿಡಗಳನ್ನು ವಿತರಿಸಲು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರಾದ ಲಾಲಪ್ಪ ಸಭೆಯ ಗಮನ ಸೆಳೆದರು.

ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಹಲವು ಸರ್ಕಾರಿ ಕಚೇರಿಗಳು ಕರ್ತವ್ಯ ನಿರ್ವಹಿಸುತ್ತಿವೆ. ಈ ಭಾಗದಲ್ಲಿ ಈ ಹಿಂದೆ ಇದ್ದಂತಹ ಮಾದರಿಯಲ್ಲಿಯೇ ಪೊನ್ನಂಪೇಟೆಗೆ ಸೀಮಿತಗೊಂಡು ವಿದ್ಯುತ್ ಫೀಡರ್ ಅಳವಡಿಸುವಂತೆ ಗ್ರಾಮಸ್ಥರಾದ ಐನಂಡ ಬೋಪಣ್ಣ ಅಧ್ಯಕ್ಷರ ಗಮನ ಸೆಳೆದರು. ಈ ಸಂದರ್ಭ ಗೋಣಿಕೊಪ್ಪಲುವಿನ ಚೆಸ್ಕಾಂ ಅಧಿಕಾರಿ ಎಸ್.ಆರ್.ಕೃಷ್ಣಕುಮಾರ್, ಈ ಬಗ್ಗೆ ಸದ್ಯದಲ್ಲಿಯೇ ಹೊಸ ಫೀಡರ್ 5ನ್ನು ಅಳವಡಿಸಲಾಗುವದು. ಬೇರೆ ಗ್ರಾಮೀಣ ಭಾಗಗಳಿಗೆ ವಿದ್ಯುತ್ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಒಂದು ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ಬಡ ಜನತೆ ನಿವೇಶನಕ್ಕಾಗಿ 94ಸಿ ಅರ್ಜಿ ಸಲ್ಲಿಸಿದ ಬಗ್ಗೆ ಮಾಹಿತಿ ನೀಡುವಂತೆ ಗ್ರಾಮಸ್ಥರಾದ ಕೋಳೇರ ದಯಾ ಚಂಗಪ್ಪ ಅಧಿಕಾರಿಗಳಿಂದ ಮಾಹಿತಿ ಬಯಸಿದರು. ಈ ಸಂದರ್ಭ ಕಂದಾಯ ಇಲಾಖೆಯ ಆರ್‍ಐ ರಾಧಾಕೃಷ್ಣ ಮಾಹಿತಿ ಒದಗಿಸುತ್ತ ಈ ಭಾಗದಲ್ಲಿ 158 ಮಂದಿ ಹಕ್ಕು ಪತ್ರಕ್ಕಾಗಿ 94ಸಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. 92 ಹಕ್ಕು ಪತ್ರ ನೀಡಲಾಗಿದೆ. 22 ಮಂದಿಗೆ ಸರ್ವೆ ಆಗಬೇಕಾಗಿದೆ. 40 ಅರ್ಜಿಗಳು ತಿರಸ್ಕಾರಗೊಂಡಿವೆ. ಖಾಸಗಿ ಜಾಗದಲ್ಲಿ ಇರುವವರು ಇದಕ್ಕೆ ಸೂಕ್ತರಲ್ಲ. ಕೆಲವು ನಿವೇಶನಗಳ ಸರ್ವೆ ಕಾರ್ಯ ಪ್ರಗತಿಯಲ್ಲಿದೆ ಎಂದರು.ವಿವಿಧ ಇಲಾಖೆಯ ಯೋಜನೆಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.ಪಂಚಾಯ್ತಿಯ ಅಭಿವೃದ್ದಿಗೆ, ಶುಚಿತ್ವಕ್ಕೆ ಗ್ರಾಮಸ್ಥರು ಸದಾ ಪಂಚಾಯ್ತಿಗೆ ಸಹಕಾರ ನೀಡುವಂತೆ ಪಂಚಾಯ್ತಿ ಅಧ್ಯಕ್ಷೆ ಮೂಕಳೇರ ಸುಮಿತ ಗಣೇಶ್ ಗ್ರಾಮಸ್ಥರಲ್ಲಿ ಮನವಿ ಮಾಡಿದರು. ಸರ್ಕಾರದ ನಿಯಮದಂತೆ ಪಂಚಾಯ್ತಿಗೆ ಬರುವ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಪ್ರಯತ್ನ ಮಾಡಲಾಗುವದು ಎಂದರು.

ನೋಡಲ್ ಅಧಿಕಾರಿಯಾಗಿ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆದ ವಿ.ಕೆ. ಮಹಾದೇವ್‍ರವರು ಉಪಸ್ಥಿತರಿದ್ದರು. ಜಿ.ಪಂ.ಸದಸ್ಯರಾದ ಶ್ರೀಜಾ ಸಾಜಿಅಚ್ಚುತ್ತನ್,ತಾ.ಪಂ.ಸದಸ್ಯರಾದ ಮೂಕಳೇರ ಆಶಾ, ಪಂಚಾಯ್ತಿ ಉಪಾಧ್ಯಕ್ಷೆ ಮಂಜುಳಸುರೇಶ್, ಸದಸ್ಯರಾದ ಅಣ್ಣೀರ ಹರೀಶ್, ಆಲೀರ ಇ.ಹಾರೀಸ್,ಎಂ.ರಶೀದ್, ಚಂದ್ರಸಿಂಗ್‍ಆರ್. ಅನೀಶ್ ಎಂ.ಬಿ., ಜಯಲಕ್ಷ್ಮಿ, ಸಿ.ಯಶೋದ, ಮಂಜು ಟಿ.ಸಿ., ಅಡ್ಡಂಡ ಸುನೀಲ್, ರೂಪ, ರಸಿಕ, ರಾಜು, ಸುಬೇಧ, ಸುಮತಿ, ಅಮ್ಮತ್ತೀರ ಸುರೇಶ್, ಮೂಕಳೇರ ಲಕ್ಷ್ಮಣ, ಬೊಟ್ಟಂಗಡ ದಶಮಿ, ,ಮೂಕಳೇರ ಕಾವ್ಯ ಸೇರಿದಂತೆ ಇನ್ನಿತರ ಸದಸ್ಯರು ಪಂಚಾಯ್ತಿ ಸಿಬ್ಬಂದಿಗಳು ಹಾಜರಿದ್ದರು.

ಕಾರ್ಯಸೂಚಿಯಂತೆ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಪುಟ್ಟರಾಜು ಗ್ರಾಮ ಸಭೆ ನಡೆಸಿದರು. ಕಾರ್ಯದರ್ಶಿ ಸುರೇಶ್ ಸ್ವಾಗತಿಸಿ ದರು. ಕಳೆದ ಸಾಲಿನ ವರದಿಯನ್ನು ಪಂಚಾಯ್ತಿಯ ಸಿಬ್ಬಂದಿ ವಾಚಿಸಿದರು. ನಿರೀಕ್ಷೆಗೂ ಮೀರಿ ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಗ್ರಾಮ ಸಭೆಗೆ ಹಾಜರಾಗಿದ್ದು ವಿಶೇಷವಾಗಿತ್ತು. ವಿವಿಧ ಯೋಜನೆಗಳಿಗೆ ಫಲಾನುಭವಿ ಗಳನ್ನು ಆಯ್ಕೆ ಮಾಡಲಾಯಿತು. ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮದ ಪ್ರಮುಖರು, ಸಂಘಸಂಸ್ಥೆಯ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

-ಹೆಚ್.ಕೆ.ಜಗದೀಶ್