ಕೂಡಿಗೆ, ಸೆ. 25: ಇಲ್ಲಿಗೆ ಸಮೀಪದ ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಮದಲಾಪುರ ಗ್ರಾಮದಲ್ಲಿರುವ ಮದಲಾಪುರ ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾಸಭೆ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಎಸ್.ಎನ್. ರಾಜಾರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಎಸ್.ಎನ್. ರಾಜಾರಾವ್ ಮಾತನಾಡಿ, ಹಾಸನ ಹಾಲು ಒಕ್ಕೂಟದಿಂದ ಜಿಲ್ಲೆಯ ಸಹಕಾರ ಸಂಘಗಳ ಕಟ್ಟಡ ಕಟ್ಟಲು ಧನ ಸಹಾಯ ನೀಡಲು ಒಪ್ಪಿದ್ದು, ಈ ಸಾಲಿನಲ್ಲಿ ತಮ್ಮ ಸಂಘದ ಮೇಲ್ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡುವದಾಗಿ ಭರವಸೆ ನೀಡಿರುವ ಹಿನ್ನೆಲೆ ಆಡಳಿತ ಮಂಡಳಿ ಮತ್ತು ಸದಸ್ಯರುಗಳು ಕಾರ್ಯೋನ್ಮುಕರಾಗಬೇಕು ಎಂದರು. ಸಂಘಕ್ಕೆ ಕಂಪ್ಯೂಟರ್ ಖರೀದಿಸುವ ಬಗ್ಗೆ ಚಿಂತಿಸಲಾಗಿದೆ. ರೈತರು ಉತ್ತಮ ಗುಣಮಟ್ಟದ ಹಾಲನ್ನು ಸಹಕಾರ ಸಂಘಕ್ಕೆ ಹಾಕುವದರ ಮೂಲಕ ಹೈನುಗಾರಿಕೆಗೆ ಬೇಕಾಗುವ ಸಾಲ ಸೌಲಭ್ಯಗಳನ್ನು ಹೆಚ್ಚಿನ ಹಂತದಲ್ಲಿ ನೀಡಲಾಗುವದು ಎಂದರು. ಸಭೆಯಲ್ಲಿ ಇದ್ದ ಸದಸ್ಯರುಗಳು ಅಭಿಪ್ರಾಯಗಳನ್ನು ಮಂಡಿಸಿದರು. ಸಂಘದ ವರದಿ ವಾಚನವನ್ನು ಕಾರ್ಯದರ್ಶಿ ಹೆಚ್.ಕೆ. ಸುಶೀಲ ಮಂಡಿಸಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಗೀತಾ, ನಿರ್ದೇಶಕರುಗಳಾದ ಹೆಚ್.ಕೆ. ಮೋಹನ್, ಬಿ.ವಿ. ಚಿದಂಬರ, ಕಾವೇರಪ್ಪ, ನಿಂಗಪ್ಪ, ನಾಗರಾಜು, ಸುನಿಲ್ ರಾವ್, ಮಲ್ಲಿಕಾ, ಉದಯ್ ಹಾಗೂ ಸಂಘದ ಸದಸ್ಯರು ಇದ್ದರು.