ಸೋಮವಾರಪೇಟೆ, ಸೆ. 25: ಕೆ.ಸಿ.ಸಿ. ಸಾಲವನ್ನು ಸಕಾಲದಲ್ಲಿ ಪಾವತಿಸಿ ಸರ್ಕಾರದ ಬಡ್ಡಿ ಸಹಾಯ ಧನ ಪಡೆದುಕೊಳ್ಳುವಂತಾಗಬೇಕು ಎಂದು ಚೌಡ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಟಿ. ಪರಮೇಶ್ ಮನವಿ ಮಾಡಿದರು.

ತೋಳೂರುಶೆಟ್ಟಳ್ಳಿಯ ಸಹಕಾರ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2017-18ನೇ ಸಾಲಿನಲ್ಲಿ ರೂ. 17,24,46,256 ಕೆ.ಸಿ.ಸಿ. ಸಾಲ ವಿತರಿಸಲಾಗಿದೆ. ಸರ್ಕಾರದ ಸಾಲಮನ್ನಾದಿಂದ ಒಟ್ಟು 1161 ಸದಸ್ಯರಿಗೆ 5,24,67,961ಗಳ ಸೌಲಭ್ಯ ದೊರೆತಿದ್ದು, ಇದರಲ್ಲಿ ಏಪ್ರಿಲ್ 2018 ರಿಂದ ಕೆ.ಸಿ.ಸಿ. ಸಾಲ ಪಾವತಿಸಿದ ಸದಸ್ಯರಿಗೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನಿಂದ ರೂ. 50 ಸಾವಿರದಂತೆ ಸಾಲಮನ್ನಾ ಹಣವನ್ನು ಕೊಡಲಾಗಿದೆ. ಸರ್ಕಾರದಿಂದ ಕೆಲವು ಸದಸ್ಯರಿಗೆ ಸಾಲಮನ್ನಾ ರೂ. 50 ಸಾವಿರಗಳಂತೆ ಬರಲು ಬಾಕಿ ಇದೆ ಎಂದರು.

2017-18ನೇ ಸಾಲಿನಲ್ಲಿ 620 ಟನ್ ಗೊಬ್ಬರ ಖರೀದಿಸಿ ವ್ಯಾಪಾರ ಲಾಭ ರೂ. 7,16,099 ಬಂದಿದೆ. ಸದಸ್ಯರಿಗೆ ಗೊಬ್ಬರ ಸಾಲವಾಗಿ ರೂ. 1,41,38,798 ಗಳನ್ನು ವಿತರಿಸಲಾಗಿದೆ. ಸಂಘದಲ್ಲಿ ಪಡಿತರ ದಾಸ್ತಾನನ್ನು ಯಾವದೇ ಲಾಭವಿಲ್ಲದೆ ವಿತರಿಸಲಾಗುತ್ತಿದೆ. ಚೌಡ್ಲು ಗ್ರಾಮದಲ್ಲಿ ಗೋದಾಮು ಮತ್ತು ವಾಣಿಜ್ಯ ಸಂಕೀರ್ಣ ಕಟ್ಟಡದ ಕಾಮಗಾರಿಯು ಶೇ. 90 ರಷ್ಟು ಮುಗಿದಿದ್ದು ಅತೀ ಶೀಘ್ರದಲ್ಲಿ ಉದ್ಘಾಟನೆಯಾಗಲಿದೆ ಎಂದು ಕೆ.ಟಿ. ಪರಮೇಶ್ ಹೇಳಿದರು.

ತೋಳೂರುಶೆಟ್ಟಳ್ಳಿ ಗೋದಾಮು ಮತ್ತು ಸಭಾಂಗಣದ ಸುತ್ತ ಕಾಂಪೌಂಡ್ ನಿರ್ಮಿಸಲು ಅಂದಾಜು ಪಟ್ಟಿಯನ್ನು ತಯಾರಿಸಲಾಗಿದೆ. 2017-18ನೇ ಸಾಲಿಗೆ ಸದಸ್ಯರಿಗೆ ಶೇ. 6 ರಂತೆ ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ ಎಂದರು.

ಸಭೆಯಲ್ಲಿ ಉಪಾಧ್ಯಕ್ಷೆ ಜಾನಕಿ ವೆಂಕಟೇಶ್, ನಿರ್ದೇಶಕರಾದ ಎಲ್.ಜಿ. ಮದನ್, ವೈ.ಎಂ. ನಾಗರಾಜು, ಎಸ್.ಬಿ. ಈರಪ್ಪ, ಕವಿತಾ ವಿರೂಪಾಕ್ಷ, ಕೆ.ಪಿ. ಭಾನುಪ್ರಕಾಶ್, ಡಿ.ಸಿ. ರಾಜು, ಕೆ.ಎಸ್. ವಿಜಯ, ಹೆಚ್.ಎಲ್. ವಿಜೇಂದ್ರ, ಮೇಲ್ವಿಚಾರಕ ಎಂ.ಜೆ. ಜಯಪ್ರಕಾಶ್ ಅವರುಗಳು ಉಪಸ್ಥಿತರಿದ್ದರು.