ಕೂಡಿಗೆ, ಸೆ. 25: ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಹಲವು ಸಂಘ-ಸಂಸ್ಥೆಗಳಿಂದ ಹಲವು ರೀತಿಯ ಸೌಲಭ್ಯಗಳನ್ನು ಮಾಡಿಕೊಡಲಾಗುತ್ತಿದೆ. ಅದರಂತೆ ಕೂಡುಮಂಗಳೂರು ಗ್ರಾಮದಲ್ಲಿ ಹಾರಂಗಿ-ಕಾವೇರಿ ಸಂಗಮ ನದಿಗಳ ದಡಕ್ಕೆ ಹೊಂದಿಕೊಂಡಂತೆ ಜಮೀನನ್ನು ಹೊಂದಿದ್ದ ಬಡ ರೈತ ಯೋಗೇಶ್ ಎಂಬವರ ಮನೆಯು ನದಿ ನೀರು ಹೆಚ್ಚಳದಿಂದ ಸಂಪೂರ್ಣ ನೆಲಸಮಗೊಂಡು, ಮನೆಯಲ್ಲಿದ್ದ ಎಲ್ಲ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದವು. ಇದನ್ನು ಗುರುತಿಸಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯಿತ ಯುವ ವೇದಿಕೆ ವತಿಯಿಂದ ನೆರೆ ಸಂತ್ರಸ್ತ ಯೋಗೇಶ್ ಅವರಿಗೆ ಸಿದ್ಧಗಂಗಾ ನಿಲಯ ಎಂಬ ಹೆಸರಿನಲ್ಲಿ ಸುಮಾರು ರೂ. 7 ರಿಂದ 9 ಲಕ್ಷ ವೆಚ್ಚದಲ್ಲಿ ಸಂಪೂರ್ಣವಾಗಿ ಒಂದು ಮನೆ ನಿರ್ಮಾಣ ಮಾಡಲು ಮುಂದಾಗಿದ್ದು, ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಅವರ ಸಮ್ಮುಖದಲ್ಲಿ ಭೂಮಿ ಪೂಜೆಯನ್ನು ನೆರವೇರಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯೆ ಕುಮುದಾ ಧರ್ಮಪ್ಪ ಭೂಮಿಪೂಜೆ ಮಾಡಿದರು. ಈ ಸಂದರ್ಭ ಬೆಂಗಳೂರು ಕರ್ನಾಟಕ ರಾಜ್ಯ ವೀರಶೈವ ಲಿಂಗಾಯಿತ ಯುವ ವೇದಿಕೆಯ ಪ್ರಶಾಂತ್ ಕಲ್ಲೂರು, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯರಾದ ರಮೇಶ್, ಹರೀಶ್, ಮುಳ್ಳುಸೋಗೆಯ ಲೋಕೇಶ್, ಸದಾನಂದ, ಕೂಡುಮಂಗಳೂರು ಸಹಕಾರ ಸಂಘದ ನಿರ್ದೇಶಕ ಕೆ.ಕೆ. ಭೊಗಪ್ಪ, ಕೂಡುಮಂಗಳೂರು ವೀರಶೈವ ಯುವ ವೇದಿಕೆಯ ಪ್ರಮುಖರಾದ ಮಂಜುನಾಥ್, ಗುರುಲಿಂಗಪ್ಪ, ಅವಿನಾಶ್, ಪ್ರಸಾದ್ ಮತ್ತಿತರರು ಇದ್ದರು.