ಕೂಡಿಗೆ, ಸೆ.24: ಸುಮಾರು 10 ಲಕ್ಷ ಮೌಲ್ಯದ ಬೀಟೆ ಮರವನ್ನು ಕಳ್ಳತನ ಮಾಡಿ, ಪಕ್ಕದ ಅರಕಲಗೂಡಿನ ಸಾ ಮಿಲ್‍ನಲ್ಲಿ ತುಂಡುಗಳನ್ನಾಗಿ ಪರಿವರ್ತಿಸುತ್ತಿದ್ದ ಸಂದರ್ಭ ಅರಣ್ಯಾಧಿಕಾರಿಗಳ ಧಾಳಿ ನಡೆಸಿ ಮೂವರು ಆರೋಪಿಗಳು ಪರಾರಿಯಾಗಿರುವ ಘಟನೆ ನಡೆದಿದೆ.ಸೋಮವಾರಪೇಟೆ ಸಮೀಪದ ಹಾನಗಲ್ಲು ಶೆಟ್ಟಳ್ಳಿ ಗ್ರಾಮದ ನಂದ, ಅಭಿಷೇಕ್ ಮತ್ತು ನಿತ್ಯ ಎಂಬವರುಗಳೇ ಸ್ಥಳದಿಂದ ಪರಾರಿಯಾದವರಾಗಿದ್ದು, ಸುಮಾರು 10 ಲಕ್ಷ ಮೌಲ್ಯದ ಬೀಟೆ ಮರ ಸಹಿತ ಸ್ವಿಪ್ಟ್ ಡಿಸೈರ್ ಕಾರು (ಕೆ.ಎ. 12 ಎನ್.6250) ವಶಕ್ಕೆ ಪಡೆಯಲಾಗಿದೆ.ಸೋಮವಾರಪೇಟೆ ವ್ಯಾಪ್ತಿಯಿಂದ ಬೀಟೆ ಮರಗಳನ್ನು ಅಕ್ರಮವಾಗಿ ಕಡಿದು ವಾಹನದಲ್ಲಿ ಅರಕಲಗೂಡಿಗೆ ಸಾಗಿಸಿದ್ದು, ಅಲ್ಲಿನ ಹೆತ್ತಗೌಡನಹಳ್ಳಿಯಲ್ಲಿರುವ ಸಾ ಮಿಲ್‍ನಲ್ಲಿ ತುಂಡುಗಳನ್ನಾಗಿ ಪರಿವರ್ತಿಸಲಾಗುತ್ತಿತ್ತು. ಈ ಸಂದರ್ಭ ಸೋಮವಾರಪೇಟೆ ಅರಣ್ಯ ಇಲಾಖಾಧಿಕಾರಿಗಳು ಮತ್ತು ಅರಕಲಗೂಡಿನ ಅರಣ್ಯ ಇಲಾಖಾ ಸಿಬ್ಬಂದಿಗಳು ಏಕಕಾಲಕ್ಕೆ ಧಾಳಿ ನಡೆಸಿದ್ದಾರೆ.ಸೋಮವಾರಪೇಟೆಯ ಅರಣ್ಯಾಧಿಕಾರಿಗಳನ್ನು ಕಂಡಾಕ್ಷಣ ಸ್ಥಳದಲ್ಲಿದ್ದ ನಂದ, ಅಭಿಷೇಕ್ ಮತ್ತು ನಿತ್ಯ ಅವರುಗಳು ಹೊಲದಲ್ಲಿ ಓಡಿ ಪರಾರಿಯಾಗಿದ್ದು, ಸ್ಥಳದಲ್ಲಿದ್ದ ಬೀಟೆ ತುಂಡುಗಳು ಹಾಗೂ ಕಾರನ್ನು ವಶಕ್ಕೆ ಪಡೆಯಲಾಗಿದೆ. ಇದರೊಂದಿಗೆ ಅರಕಲಗೂಡಿನ ಯೋಗೇಶ್ ಎಂಬವರಿಗೆ ಸೇರಿದ ಶ್ರೀಕಂಠೇಶ್ವರ ಸಾ ಮಿಲ್‍ನ್ನು ಜಪ್ತಿ ಮಾಡಲಾಗಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.

ಅರಕಲಗೂಡು ವಲಯಾರಣ್ಯಾಧಿಕಾರಿಗಳ ಕಚೇರಿಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಬೀಟೆ ಮರವನ್ನು ಎಲ್ಲಿಂದ ಕಟಾವು ಮಾಡಲಾಗಿದೆ ಎಂಬ ಬಗ್ಗೆ ಸೋಮವಾರಪೇಟೆ ಅರಣ್ಯಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅಕ್ರಮವಾಗಿ ಮರವನ್ನು ಸಾಗಾಟಗೊಳಿಸಿದ ವಾಹನ, ಹೆಚ್ಚಿನ ಆರೋಪಿಗಳ ಬಗ್ಗೆ ತನಿಖೆ ನಂತರಷ್ಟೇ ತಿಳಿಯಬೇಕಿದೆ. ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್ ಅವರು ತಿಳಿಸಿದ್ದಾರೆ.

ಲಕ್ಷ್ಮೀಕಾಂತ್ ಮತ್ತು ಅರಕಲಗೂಡು ವಲಯಾರಣ್ಯಾಧಿಕಾರಿ ವಿನಯಚಂದ್ರ ಅವರುಗಳ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಉಪ ವಲಯ ಅರಣ್ಯಾಧಿಕಾರಿ ಮಹದೇವ ನಾಯಕ್, ಅರಣ್ಯ ರಕ್ಷಕ ಸುಭಾಷ್, ಪ್ರಮೋದ್, ವಾಹನ ಚಾಲಕ ಚಂದ್ರನ್ ಅವರುಗಳು ಭಾಗವಹಿಸಿದ್ದರು.