ಕೂಡಿಗೆ, ಸೆ. 23: ರಾಜ್ಯದ ಪ್ರಥಮ ಡೈರಿಯಾಗಿರುವ ಕೂಡಿಗೆ ಡೈರಿಯನ್ನು ಈಗಾಗಲೇ ಅಭಿವೃದ್ಧಿಯತ್ತ ಕೊಂಡೋಯ್ಯಲು ರೂ. 5 ಕೋಟಿ ಅನುದಾನದಲ್ಲಿ ಅತ್ಯಾಧುನಿಕ ಹಾಲು ಪರಿಷ್ಕರಣ ಘಟಕವನ್ನು ಕಳೆದ ಮೂರು ವರ್ಷಗಳಲ್ಲೆ ಪ್ರಾರಂಭಿಸಲಾಗಿದೆ. ಮುಂದಿನ ಸಾಲಿನಲ್ಲಿ ಕೂಡಿಗೆ ಡೈರಿಯಲ್ಲಿ ಹಾಲಿನ ಉತ್ಪನ್ನಗಳನ್ನು ಇನ್ನಿತರ ಉತ್ಪನ್ನಗಳನ್ನು ತಯಾರಿಸಲು ಹಾಗೂ ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಲಾಗಿದೆ ಎಂದು ಹಾಸನ ಹಾಲು ಒಕ್ಕೂಟದ ಪ್ರಧಾನ ವ್ಯವಸ್ಥಾಪಕ ಗೋಪಾಲಯ್ಯ ತಿಳಿಸಿದ್ದಾರೆ.

ಕೂಡಿಗೆ ಹಾಲಿನ ಡೈರಿಯ ನೌಕರರು ಹಾಗೂ ಸಿಬ್ಬಂದಿಗಳು ಆಯೋಜಿಸಿದ್ದ ಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭ ಮಾತನಾಡಿದರು. ಮುಂದಿನ ದಿನಗಳಲ್ಲಿ ಹಾಸನ ಹಾಲು ಒಕ್ಕೂಟದ ಸಭೆಯಲ್ಲಿ ಚರ್ಚಿಸುವ ಮೂಲಕ ಕೊಡಗು ಜಿಲ್ಲೆಯ ಕೂಡಿಗೆ ಡೈರಿಯಲ್ಲಿ ಹಾಲಿನ ಉತ್ಪನ್ನಗಳನ್ನು ಇನ್ನಿತರ ಉತ್ಪನ್ನಗಳ ಪ್ರಗತಿಗೆ ಸಂಬಂಧಿಸಿದಂತೆ ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಅಭಿವೃದ್ಧಿ ಪಡಿಸುವತ್ತ ಜಿಲ್ಲೆಯ ಗ್ರಾಹಕರಿಗೆ ಎಲ್ಲ ರೀತಿಯ ಸಹಕಾರವನ್ನು ನೀಡಲು ಪ್ರಯತ್ನಿಸಲಾಗುವದೆಂದರು. ಈ ಸಾಲಿನ ಬಜೆಟ್‍ನಲ್ಲಿ ಆಡಳಿತ ಮಂಡಳಿಯ ತೀರ್ಮಾನದಂತೆ ಹೆಚ್ಚುವರಿ ಹಾಲಿನ ಸಂಸ್ಕರಣ ಘಟಕವನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹಾಲಿನ ಉತ್ಪನ್ನಗಳನ್ನು ಕೂಡಿಗೆ ಡೈರಿಯಲ್ಲೆ ಉತ್ಪಾದಿಸುವ ಚಿಂತನೆ ನಡೆಸಲಾಗುತ್ತಿದೆ. ಈಗಿರುವ ಮೊದಲನೇ ಡೈರಿಯ ಆಡಳಿತ ಕಚೇರಿ ನಡೆಯುತ್ತಿರುವ ಕಟ್ಟಡದ ದುರಸ್ತಿಗೆ ಆಡಳಿತ ಮಂಡಳಿಯವರ ಗಮನಕ್ಕೆ ತಂದು ಸಭೆಯಲ್ಲಿ ಚರ್ಚಿಸಲಾಗಿದೆ. ಸಂಬಂಧಪಟ್ಟ ಇಂಜಿನಿಯರ್ ಸ್ಥಳ ಪರಿಶೀಲಿಸಿ ವ್ಯವಸ್ಥಿತವಾಗಿ ಕಟ್ಟಡ ನಿರ್ಮಿಸುವ ಬಗ್ಗೆ ನಕಾಶೆಯನ್ನು ನೀಡಿರುತ್ತಾರೆ. ಅದರ ಮುಖೇನ ಹಳೆಯ ಕಟ್ಟಡವು ಬೀಳುವ ಹಂತದಲ್ಲಿರುವದನ್ನು ಸರಿಪಡಿಸಲಾಗುವದು. ಕೂಡಿಗೆ ಡೈರಿ ನೌಕರರಿಗೆ ಅನುಕೂಲವಾಗುವಂತೆ ವಸತಿ ಗೃಹ ನಿರ್ಮಾಣದ ಬಗ್ಗೆ ಚಿಂತನೆ ನಡೆಸಿದ್ದು, ಈಗಾಗಲೇ ಇರುವ ಹಳೆಯು ಕೊಠಡಿಗಳು ಕೃಷಿ ಇಲಾಖೆಯ ಅಧೀನದಲ್ಲಿದ್ದು, ಅವುಗಳ ದಾಖಲಾತಿ ವರ್ಗಾವಣೆಗೆ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಲಾಗಿದೆ. ಶೀಘ್ರವಾಗಿ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಲಾಗುವದು ಎಂದು ತಿಳಿಸಿದರು.

ದಿನದ 24 ಗಂಟೆಯು ಚಟುವಟಿಯಿಂದ ಕೂಡಿರುವ ಕೂಡಿಗೆ ಡೈರಿಯಲ್ಲಿ ಸುಸಜ್ಜಿತ, ಅತ್ಯಾಧುನಿಕ ಯಂತ್ರೋಪಕರಣಗಳಿದ್ದು ದಿನದ 24 ಗಂಟೆಗಳಲ್ಲಿಯು ಕೂಡಿಗೆ ಡೈರಿಯು ಹಾಲು ಸಂಗ್ರಹಣೆ, ಶೇಖರಣೆ, ಸಂಸ್ಕರಣೆ ಸೇರಿದಂತೆ ವಿವಿಧ ಕಾರ್ಯಗಳು ನಡೆಯುತ್ತಲೆ ಇರುತ್ತವೆ.

ಹಾಲನ್ನು ಅತ್ಯುತ್ತಮ ಗುಣಮಟ್ಟದಲ್ಲಿ ಕಾಪಾಡಲೆಂದೇ ಕೋಟಿಗಟ್ಟಲೆ ಬೆಲೆಬಾಳುವ ಆಧುನಿಕ ಯಂತ್ರಗಳನ್ನು ಅಳವಡಿಸಲಾಗಿದ್ದು, ಹಾಲಿನ ಸಂಸ್ಕರಣಾ ಕಾರ್ಯವು ಅತ್ಯಂತ ಅಚ್ಚುಕಟ್ಟಾಗಿ ನಡೆಯುವದರ ಮೂಲಕ ಹಾಲಿನ ಗುಣಮಟ್ಟ ಗ್ರಾಹಕರಿಗೆ ತಲಪುವಂತೆ ಕಾಯ್ದಿರಿಸಿಕೊಳ್ಳಲಾಗಿದೆ. ಇತ್ತೀಚೆಗೆ ರೂ. 3 ಕೋಟಿ ವೆಚ್ಚದಲ್ಲಿ ಒಕ್ಕೂಟ ಕೂಡಿಗೆ ಘಟಕಕ್ಕೆ ಆಧುನೀಕತೆಯ ವ್ಯವಸ್ಥೆಯನ್ನು ಕಲ್ಪಿಸಿದ್ದು, ಸಹಕಾರ ಸಂಘಗಳಿಂದ ಬರುವ ಹಾಲನ್ನು ಪರಿಷ್ಕರಿಸಿ ನೂತನ ತಾಂತ್ರೀಕತೆಯ ಪರೀಕ್ಷೆಗಳಿಗೊಳಪಡಿಸಿ ಸ್ವೀಕರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.

ಈಗಾಗಲೇ ಟೋನ್ಡ್ ಮತ್ತು ಹೋಮೋಜಿನಸ್ ಹಾಗೂ ಹಾಲಿ ಉತ್ಪನ್ನಗಳಲ್ಲದೆ ಪೇಡ, ಮೊಸರು, ಮಜ್ಜಿಗೆ, ತುಪ್ಪ, ಕುಂದಾ, ಮೈಸೂರ್ ಪಾಕ್, ಜಾಮೂನ್, ಐಸ್‍ಕ್ರೀಂ ಸೇರಿದಂತೆ ಹಾಲಿನಿಂದ ತಯಾರಿಸಲಾದ ಒಟ್ಟು 35 ಬಗೆಯ ಉತ್ಪನ್ನಗಳು ಮಾರಾಟಕ್ಕೆ ದೊರಕುತ್ತಿವೆ. ಕೂಡಿಗೆ ಡೈರಿಯಲ್ಲಿ ಹಾಲು ಮಾತ್ರ ಪರಿಷ್ಕರಣೆಗೊಂಡು ತಯಾರಾಗುತ್ತಿದ್ದರೆ, ಉಳಿದ ಎಲ್ಲ ಹಾಲಿ ಉತ್ಪನ್ನಗಳನ್ನು ಹಾಸನದಿಂದ ಉತ್ಪಾದಿಸಿ, ಕೂಡಿಗೆ ಡೈರಿಯ ಮೂಲಕ ಜಿಲ್ಲೆಯ ವಿವಿಧ ಮಾರಾಟ ಮಳಿಗೆಗಳಲ್ಲಿ ಮಾರಾಟವಾಗುತ್ತಿವೆ. ಜಿಲ್ಲೆಯಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸಂಘದ ನೋಂದಣಿ ಮತ್ತು ಜಾಗದ ದಾಖಲಾತಿ ಇದ್ದಲ್ಲಿ ಕಟ್ಟಡ ಅನುದಾನವಾಗಿ ಹಾಸನ ಹಾಲು ಒಕ್ಕೂಟದಿಂದ 2 ಲಕ್ಷ, ಕರ್ನಾಟಕ ರಾಜ್ಯ ಕೆಎಂಎಫ್ ವತಿಯಿಂದ ಮೂರು ಲಕ್ಷ ಸೇರಿ 5 ಲಕ್ಷ ರೂ. ಅನ್ನು ಕಟ್ಟಡ ನಿರ್ಮಾಣಕ್ಕೆ ನೀಡಲಾಗುವದು. ಅಲ್ಲದೆ, ಆಡಳಿತ ಮಂಡಳಿಯವರಿಗೆ ಆಡಳಿತಾತ್ಮಕವಾಗಿ ಕಾರ್ಯನಿರ್ವಹಿಸಲು ಹಂತ ಹಂತವಾಗಿ ತರಬೇತಿಯನ್ನು ಉಚಿತವಾಗಿ ನೀಡಿ ಹಾಲು ಉತ್ಪಾದಕ ಸಹಕಾರ ಸಂಘದ ಬೆಳವಣಿಗೆಗೆ ಸಹಕಾರ ನೀಡಲಾಗುತ್ತಿದೆ ಎಂದರು.

ಈ ಸಂದರ್ಭ ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲಾ ನಿರ್ದೇಶಕ ಕೆ.ಟಿ. ಅರುಣ್‍ಕುಮಾರ್, ಕೂಡಿಗೆ ಡೈರಿ ವ್ಯವಸ್ಥಾಪಕ ನಂದೀಶ್ ಇದ್ದರು.

- ಕೆ.ಕೆ. ನಾಗರಾಜಶೆಟ್ಟಿ.