ಮಡಿಕೇರಿ, ಸೆ. 23: ಕೊಡಗು ಜಿಲ್ಲೆಯ ಪರಿಸರವನ್ನು ಸ್ವಚ್ಛಗೊಳಿಸಿ ಉತ್ತಮ ವಾತಾವರಣ ಸೃಷ್ಟಿಸಲು ಯೋಜನೆ ಹಮ್ಮಿಕೊಂಡು ಕಾರ್ಯಪ್ರವೃತ್ತವಾಗಿರುವ ‘ಕೊಡಗು ಫಾರ್ ಟುಮಾರೋ’ ಸ್ವಯಂ ಸೇವಾ ತಂಡದ ಸದಸ್ಯರಿಗೆ ಮಾದಾಪುರ ಸನಿಹದ ಹರದೂರಿನಲ್ಲಿ ಬರಪೂರ ಕೆಲಸ ಎದುರಾಗಿತ್ತು. ಜಿಲ್ಲೆಯಲ್ಲಿ ಪ್ರಾಕೃತಿಕ ದುರಂತ ಸಂಭವಿಸಿದ ಬಳಿಕ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರು- ಮೈಸೂರು ಸೇರಿದಂತೆ ಮತ್ತಿತರ ಕಡೆಗಳಲ್ಲಿ ಉತ್ತಮ ಉದ್ಯೋಗದಲ್ಲಿರುವ ಕೊಡಗು ಮೂದಲ ಯುವಕ - ಯುವತಿಯರು, ಜಿಲ್ಲೆಯ ಯುವ ಪಡೆಯೊಂದಿಗೆ ಕೈಜೋಡಿಸಿ ವಾರಾಂತ್ಯದಲ್ಲಿ ವಿವಿಧೆಡೆಗಳಲ್ಲಿ ಪರಿಸರವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸುವ ಪಣ ತೊಟ್ಟಿದ್ದಾರೆ.
ಎರಡು ವಾರದ ಹಿಂದೆ ಗಾಳಿಬೀಡು ವಿಭಾಗದಲ್ಲಿ, ಕಳೆದ ವಾರ ಸುಂಟಿಕೊಪ್ಪ ಮುಖ್ಯರಸ್ತೆಯಲ್ಲಿ ಹಾಗೂ ಈ ವಾರಾಂತ್ಯದಲ್ಲಿ ನಿನ್ನೆ ಹಾಗೂ ಇಂದು ಈ ತಂಡ ಹಾರಂಗಿ ಹಿನ್ನೀರು ಪ್ರದೇಶದಲ್ಲಿ ಬರುವ ಹರದೂರು ಸೇತುವೆ ಬಳಿ ಸ್ವಚ್ಛತಾ ಕಾರ್ಯಾಚರಣೆ ನಡೆಸಿದೆ. ರೀ ಸೈಕಲ್ ಕೊಡಗು ಎಂಬ ಕಲ್ಪನೆಯೊಂದಿಗೆ ಮೈಸೂರು, ಬೆಂಗಳೂರಿನ ತ್ಯಾಜ್ಯ ವಿಲೇವಾರಿ ಘಟಕದ ನೆರವಿನೊಂದಿಗೆ ಈ ತಂಡ ಶ್ರಮದಾನ ನಡೆಸುತ್ತಿದ್ದು, ಮೊದಲ ವಾರ 4 ಪಿಕ್ಅಪ್ ವಾಹನ, ಕಳೆದ ವಾರ 5 ಪಿಕ್ಅಪ್ ವಾಹನದಷ್ಟು ತ್ಯಾಜ್ಯವನ್ನು ಸಂಗ್ರಹಿಸಿತ್ತು. ನಿನ್ನೆ ಹಾಗೂ ಇಂದು ನಡೆದ ಸ್ವಚ್ಛತಾ ಕೆಲಸದಲ್ಲಿ ಹರದೂರು ಸೇತುವೆ ಸುತ್ತಮುತ್ತ ಈ ತಂಡ ಸಂಗ್ರಹಿಸಿದ್ದು ಪ್ಲಾಸ್ಟಿಕ್, ಗಂಬೂಟ್ ಮತ್ತಿತರ ತ್ಯಾಜ್ಯಗಳೊಂದಿಗೆ ಬರೋಬ್ಬರಿ 32 ಸಾವಿರದಷ್ಟು ಬಾಟಲಿಗಳು(!) ಈ ತ್ಯಾಜ್ಯದೊಂದಿಗೆ ಮಳೆಯ ರಭಸದಿಂದ ಕೊಚ್ಚಿಬಂದಿದ್ದ ಮರದ ಬೇರು, ಕಸ- ಕಡ್ಡಿಗಳು, ಮರದ ಹುಡಿ ಸೇರಿದಂತೆ ಅಪಾರ ತ್ಯಾಜ್ಯಗಳನ್ನು ಸಂಗ್ರಹಿಸುವಲ್ಲಿ ಶ್ರಮವಹಿಸಬೇಕಾಯಿತು.
ಅಪಾರ ಪ್ರಮಾಣದಲ್ಲಿ ತ್ಯಾಜ್ಯ ಸಂಗ್ರಹವಾಗುತ್ತಿದ್ದರಿಂದ ಈ ಸ್ಥಳಕ್ಕೆ ಜೆ.ಸಿ.ಬಿ. ಯಂತ್ರವನ್ನು ತಂದು ಸಂಗ್ರಹಿತ ಕಸವನ್ನು ಟಿಪ್ಪರ್ ಲಾರಿಗೆ ತುಂಬಲಾಯಿತು. ಸುಮಾರು 20 ಲೋಡ್ಗಳಷ್ಟು ಇಂತಹ ತ್ಯಾಜ್ಯವನ್ನು ಸಂಗ್ರಹಿಸಲಾಗಿದೆ. ಇದರೊಂದಿಗೆ ಮರದ ರೆಂಬೆ- ತುಂಡುಗಳನ್ನು ಸೌದೆಗಳಾಗಿ ಸನಿಹದವರಿಗೆ ನೀಡಲಾಯಿತು. ಸೇತುವೆ ಸನಿಹ ಸಾಧ್ಯವಾದಷ್ಟು ಮಣ್ಣು, ಮರದ ಹುಡಿಯನ್ನು ಸನಿಹದ ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜಿನ ಗೊಬ್ಬರದ ಗುಂಡಿಗೆ ಹಾಕಲಾಯಿತು. ಆದರೂ ಸೇತುವೆ ಕೆಳಗೆ ಇನ್ನಷ್ಟು ಮರದ ಹುಡಿಯಂತಹ ಕಸ ಬಾಕಿ ಉಳಿದಿದೆ ಎಂದು ಈ ತಂಡದ ಪ್ರಮುಖರು ತಿಳಿಸಿದರು. ಈ ಸ್ವಯಂ ಸೇವಕರಿಗೆ ಕಾಲೇಜಿನ ವಿದ್ಯಾರ್ಥಿಗಳೂ ಕೈ ಜೋಡಿಸಿ ಸಹಕರಿಸಿದ್ದಾರೆ. ಇಲ್ಲಿ ವಿಲೇವಾರಿಯಾಗದ ಬಾಟಲಿ ಮತ್ತಿತರ ಕಸವನ್ನು ಬೆಂಗಳೂರಿನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕೊಂಡೊಯ್ಯುತ್ತಿರುವದಾಗಿ ನೇತೃತ್ವ ವಹಿಸಿದ್ದವರು ‘ಶಕ್ತಿ’ಗೆ ತಿಳಿಸಿದರು. ಕಂಡುಬರುತ್ತಿರುವ ತ್ಯಾಜ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಈ ತಂಡ ಕಸವನ್ನು ಎಲ್ಲೆಂದರಲ್ಲಿ ಹಾಕುವ ಬದಲು ಸಾರ್ವಜನಿಕರು ಸ್ವಯಂ ಕಾಳಜಿ ತೋರಬೇಕೆಂದು ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲೂ ತಂಡ ಸ್ವಚ್ಛತಾ ಕೆಲಸವನ್ನು ಮುಂದುವರಿಸಲಿದೆ. ಆಸಕ್ತಿ ತೋರಿ ಭಾಗಿಯಾಗುವವರು (9663662191) ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು. ನಿನ್ನೆ ಹಾಗೂ ಇಂದು ಸುಮಾರು 60 ಮಂದಿ ಶ್ರಮದಾನದಲ್ಲಿ ಭಾಗಿಯಾಗಿದ್ದರು.
ವಿದ್ಯಾಸಂಸ್ಥೆಗೂ ನೆರವಿನ ಹಸ್ತ
ಶ್ರಮದಾನದ ಸಂದರ್ಭದ ಎಲ್ಲಾ ವೆಚ್ಚವನ್ನೂ ಈ ತಂಡದ ಸದಸ್ಯರೇ ಭರಿಸುತ್ತಿದ್ದಾರೆ. ಇದರೊಂದಿಗೆ ಈ ತಂಡ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾಗಿರುವ ವಿದ್ಯಾರ್ಥಿಗಳಿಗೆ ಸಹಕರಿಸಲೂ ಮುಂದಾಗಿದೆ. ಇದರಂತೆ ಇಂದು ಮಕ್ಕಂದೂರು ಪ್ರೌಢಶಾಲೆಗೆ ರೂ. 25 ಸಾವಿರ ಹಾಗೂ ಚೆನ್ನಮ್ಮ ಕಾಲೇಜಿಗೆ ರೂ. 25 ಸಾವಿರ ಸೇರಿದಂತೆ ಒಟ್ಟು 50 ಸಾವಿರ ಮೊತ್ತವನ್ನೂ ನೀಡಿ ವಿಶೇಷತೆ ತೋರಿದ್ದಾರೆ. ಮಕ್ಕಂದೂರು ಶಾಲೆಯ ಪ್ರಮುಖರು ಹಾಗೂ ಚೆನ್ನಮ್ಮ ಕಾಲೇಜಿನ ಪ್ರಾಂಶುಪಾಲ ಮಂದಪ್ಪ ಈ ನೆರವನ್ನು ಸ್ವೀಕರಿಸಿದರು. -ಶಶಿ.