ಕುಶಾಲನಗರ, ಸೆ. 22: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಭೂಮಾಫಿಯ ದಂಧೆ ಅತಿಯಾಗಿದ್ದು, ಸರಕಾರಿ ಜಾಗಗಳು ಖಾಸಗಿ ವ್ಯಕ್ತಿಗಳಿಗೆ ಪರಭಾರೆಯಾಗುತ್ತಿರುವದು ಕಂಡುಬರುತ್ತಿದೆ. ಪಟ್ಟಣ ಪಂಚಾಯ್ತಿಗೆ ಸೇರಿದ ಅಂಗಡಿ ಮಳಿಗೆಗಳನ್ನು ಪಪಂ ಮುಖ್ಯಾಧಿಕಾರಿ ನಿಯಮಬಾಹಿರವಾಗಿ 13 ವರ್ಷಗಳ ಅವಧಿಗೆ ಬಾಡಿಗೆ ಕರಾರು ಮಾಡಿಕೊಟ್ಟಿರುವ ಪ್ರಕರಣ ನಡೆದಿದೆ.
ರಾಜಕಾಲುವೆ, ಕೆರೆಗಳಿಗೆ ಮಣ್ಣು ಮುಚ್ಚಿ ನಿಯಮ ಬಾಹಿರವಾಗಿ ಬಡಾವಣೆಗಳ ನಿರ್ಮಾಣ, ಅಕ್ರಮ ರಸ್ತೆಗಳ ನಿರ್ಮಾಣ ಮುಂತಾದ ಪ್ರಕರಣಗಳು ಇನ್ನೂ ನೆನಪಿನಿಂದ ಮಾಸುವ ಮೊದಲೇ ಕುಶಾಲನಗರದಲ್ಲಿ ನೆಲೆಕಂಡಿದ್ದ ಚಲನಚಿತ್ರ ಮಂದಿರಕ್ಕೆ ಸೇರಿದ ಕಟ್ಟಡ ಮತ್ತು ಜಾಗವನ್ನು ನಿಯಮ ಬಾಹಿರವಾಗಿ ಖಾಸಗಿ ವ್ಯಕ್ತಿಗಳಿಗೆ ನೀಡುವ ಹುನ್ನಾರ ಬೆಳಕಿಗೆ ಬಂದಿದೆ. ಕಳೆದ 4 ದಶಕಗಳ ಕಾಲ ನಾಗರಿಕರಿಗೆ ಮನೋರಂಜನೆ ಒದಗಿಸುತ್ತಿದ್ದ ಕುಶಾಲನಗರದ ವೆಂಕಟೇಶ್ವರ ಚಲನಚಿತ್ರಮಂದಿರ ಜಾಗದ ತಕರಾರಿನೊಂದಿಗೆ ಕೆಲವು ವರ್ಷಗಳಿಂದ ಕುಶಾಲನಗರ ಪಟ್ಟಣ ಪಂಚಾಯಿತಿಯ ಆಸ್ತಿಯಾಗಿ ಪಂಚಾಯಿತಿಗೆ ಒಳಪಟ್ಟಿದ್ದರೂ ಕೆಲವು ಭೂಮಾಫಿಯ ದಂಧೆ ಇದನ್ನು ವಶಪಡಿಸಿಕೊಳ್ಳಲು ಪ್ರಯತ್ನ ನಡೆಸುತ್ತಿರುವದು ಬೆಳಕಿಗೆ ಬಂದಿದೆ.
ಕುಶಾಲನಗರದಿಂದ ಮೈಸೂರಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿ ಒತ್ತಿನಲ್ಲಿರುವ ವೆಂಕಟೇಶ್ವರ ಚಿತ್ರಮಂದಿರ ಇದೀಗ ಪಾಳುಬಿದ್ದ ಕಟ್ಟಡದಂತೆ ಕಂಡುಬರುತ್ತಿದ್ದು ಸ್ಥಳೀಯ ಪಂಚಾಯಿತಿ ಆಡಳಿತ ಈ ಜಾಗ ತಮ್ಮ ಒಡೆತನಕ್ಕೆ ಸೇರಿದ್ದು ಎಂಬ ಫಲಕ ಅಳವಡಿಸಿರುವದು ಹೊರತುಪಡಿಸಿದರೆ ಇಲ್ಲಿ ಯಾವದೇ ಅಭಿವೃದ್ಧಿ ಕೆಲಸ ಕೈಗೊಳ್ಳದಿರುವದು ಸಂಶಯಕ್ಕೆ ಎಡೆಮಾಡಿದೆ ಎಂದು ಸ್ಥಳೀಯ ನಾಗರಿಕರು ದೂರಿದ್ದಾರೆ.
ಕುಶಾಲನಗರ ಪಟ್ಟಣ ಪಂಚಾಯಿತಿ ಕಚೇರಿಯನ್ನು ತೆರವುಗೊಳಿಸಿದ ಸಂದರ್ಭ ಈ ಕಟ್ಟಡದಲ್ಲಿ ಕಛೇರಿ ನಡೆಸುವ ಅವಕಾಶವಿದ್ದರೂ ಪಂಚಾಯ್ತಿ ಆಡಳಿತ ಅಂದಾಜು 50 ಸಾವಿರ ರೂ. ಗಿಂತಲೂ ಅಧಿಕ ಬಾಡಿಗೆ ಪಾವತಿಸುವ ಮೂಲಕ ಖಾಸಗಿ ಕಟ್ಟಡವೊಂದಕ್ಕೆ ಸ್ಥಳಾಂತರಿಸಿರುವ ವಿಷಯ ಕೂಡ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಂದಾಜು ಅರ್ಧ ಎಕರೆ ಪ್ರದೇಶದಲ್ಲಿರುವ ಈ ಕಟ್ಟಡವನ್ನು ನೆಲಸಮಗೊಳಿಸಿ ಬೃಹತ್ ವಾಣಿಜ್ಯ ಸಂಕೀರ್ಣ ನಿರ್ಮಿಸುವ ಮೂಲಕ ಪಂಚಾಯಿತಿಗೆ ಆದಾಯ ಕಂಡುಕೊಳ್ಳಬಹುದು ಎಂಬದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಹಲವು ವರ್ಷಗಳ ಕಾನೂನು ಹೋರಾಟದ ಮೂಲಕ ಧಕ್ಕಿಸಿಕೊಂಡ ಕೋಟ್ಯಾಂತರ ರೂ. ಬೆಲೆಬಾಳುವ ಆಸ್ತಿಯನ್ನು ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಖಾಸಗಿ ವ್ಯಕ್ತಿಯೊಬ್ಬರಿಗೆ ಪರಭಾರೆ ಮಾಡಲು ಹುನ್ನಾರ ನಡೆಸಿರುವದು ಕಂಡುಬಂದಿದೆ. ವ್ಯಕ್ತಿಯೊಬ್ಬರಿಗೆ 30 ವರ್ಷಗಳ ಕಾಲ ಅವಧಿಗೆ ಈ ಕಟ್ಟಡ ಮತ್ತು ಜಾಗವನ್ನು ಪರಭಾರೆ ಮಾಡಲು ಜಿಲ್ಲಾಡಳಿತದೊಂದಿಗೆ ಪತ್ರ ವ್ಯವಹಾರ ನಡೆದಿರುವದಾಗಿ ತಿಳಿದುಬಂದಿದೆ. ಹಿಂದಿನ ಆಡಳಿತ ಮಂಡಳಿ ಮೂಲಕ ಪಂಚಾಯ್ತಿ ಜನಪ್ರತಿನಿಧಿಯೊಬ್ಬರು ಈ ಕೋಟಿಗಟ್ಟಲೆ ಬೆಲೆಬಾಳುವ ಜಾಗವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಶತಾಯಗತಾಯ ಪ್ರಯತ್ನಿಸುತ್ತಿರುವದು ಖಚಿತಗೊಂಡಿದೆ.
ದಿನನಿತ್ಯ ಸಾವಿರಾರು ಸಂಖ್ಯೆಯ ನಾಗರಿಕರು ಸಂಚರಿಸುವ ಮುಖ್ಯರಸ್ತೆಯ ಒತ್ತಿನಲ್ಲಿ ಪುರಾತನ ಪಳೆಯುಳಿಕೆಯಂತೆ ಕಂಡುಬರುತ್ತಿರುವ ಈ ಪ್ರದೇಶಕ್ಕೆ ಕಾಯಕಲ್ಪ ನೀಡಿ ಅಭಿವೃದ್ದಿಪಡಿಸಲು ಪಂಚಾಯಿತಿ ವತಿಯಿಂದ ಯೋಜನೆ ರೂಪಿಸಬೇಕಿದೆ. ಮತ್ತೆ ಪಂಚಾಯಿತಿಗೆ ಒಳಪಟ್ಟ ಕೋಟ್ಯಾಂತರ ಬೆಲೆಬಾಳುವ ಆಸ್ತಿ ಖಾಸಗಿಯವರ ಪಾಲಾಗದಂತೆ ಜಿಲ್ಲಾಧಿಕಾರಿಗಳು ಎಚ್ಚರವಹಿಸುವದರೊಂದಿಗೆ ಅಭಿವೃದ್ಧಿಪಡಿಸಲು ಸ್ಥಳೀಯ ಆಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಬೇಕಾಗಿದೆ. ಕುಶಾಲನಗರದಲ್ಲಿ ಕೆರೆ ಕಟ್ಟೆಗಳಿಗೆ ಮಣ್ಣು ತುಂಬಿ ರಸ್ತೆ ಮಾಡಿರುವದು ಸಾರ್ವಜನಿಕ ಉಪಯೋಗಕ್ಕೆ ಮೀಸಲಾಗಿರುವ ಸರಕಾರಿ ಜಾಗಗಳು ಒತ್ತುವರಿಯಾಗಿರುವ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ತಾವರೆಕೆರೆಗೆ ಮಣ್ಣು ಮುಚ್ಚಿ ನಿಯಮಬಾಹಿರವಾಗಿ ರಸ್ತೆ ನಿರ್ಮಾಣ ಮಾಡಿದ ಕುಡಾ ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಕಾವೇರಿ ಸೇನೆಯ ಪ್ರಮುಖರಾದ ಪುಲಿಯಂಡ ರಾಮ್ ದೇವಯ್ಯ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಸರಕಾರಿ ಜಾಗಗಳ ಸಂರಕ್ಷಣೆಗೆ ವಿಶೇಷ ಅಧಿಕಾರಿಗಳ ಟಾಸ್ಕ್ ಫೋರ್ಸ್ ರಚಿಸಿ ಕ್ರಮಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಪಪಂ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್, ವೆಂಕಟೇಶ್ವರ ಚಲನಚಿತ್ರ ಮಂದಿರ ಕಟ್ಟಡ ಜಾಗಕ್ಕೆ ಸಂಬಂಧಿಸಿದಂತೆ ಹರಾಜು ಪ್ರಕ್ರಿಯೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಅನುಮತಿ ಕೋರಲಾಗಿದೆ. ಲೋಕೋಪಯೋಗಿ ಇಲಾಖೆ ಕಟ್ಟಡಕ್ಕೆ 75 ಸಾವಿರ ಮಾಸಿಕ ಬಾಡಿಗೆ ನಿಗದಿಪಡಿಸಿದ್ದು 12 ವರ್ಷದ ಅವಧಿಗೆ ಕಟ್ಟಡವನ್ನು ಲೀಸ್‍ಗೆ ನೀಡಲು ಕ್ರಮಕೈಗೊಳ್ಳಲಾಗುವದು ಎಂದಿದ್ದಾರೆ.
-ವರದಿ : ಚಂದ್ರಮೋಹನ್