ಸೋಮವಾರಪೇಟೆ, ಸೆ. 19: ಕಳೆದ ತಾ. 5 ರಂದು ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ನಾನೂ ನಗರ ನಕ್ಸಲ್ ಎಂದು ಫಲಕ ಹಾಕಿಕೊಂಡು, ನಕ್ಸಲರನ್ನು ಸಮರ್ಥನೆ ಮಾಡಿ ಕೊಂಡಿರುವ ಸಾಹಿತಿ ಗಿರೀಶ್ ಕಾರ್ನಾಡ್ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಒತ್ತಾಯಿಸಿದ್ದು, ಈ ಸಂಬಂಧ ರಾಜ್ಯ ಗೃಹ ಸಚಿವರಿಗೆ ಮನವಿ ಸಲ್ಲಿಸಿದೆ.

ದೇಶದಲ್ಲಿ ನೂರಾರು ಮಂದಿ ಅಮಾಯಕರು, ಪೊಲೀಸರು ನಕ್ಸಲರ ಧಾಳಿಗೆ ಬಲಿಯಾಗಿದ್ದು, ನಕ್ಸಲರನ್ನು ನಿಗ್ರಹಿಸಲೆಂದೇ ಹಲವು ರಾಜ್ಯಗಳು ನಕ್ಸಲ್ ನಿಗ್ರಹ ಪಡೆ ಸ್ಥಾಪಿಸಿವೆ. ಆದಾಗ್ಯೂ ಗಿರೀಶ್ ಕಾರ್ನಾಡ್ ಅವರು ನಕ್ಸಲರಿಗೆ ಬೆಂಬಲ ನೀಡುವಂತಹ ಘೋಷಣಾ ಫಲಕ ಅಳವಡಿಸಿಕೊಂಡು, ಸಂವಿಧಾನ ವ್ಯವಸ್ಥೆಯ ವಿರುದ್ಧ ಯುದ್ಧ ಸಾರುವ, ಹಿಂಸೆ ಪ್ರಚೋದಿಸುವ ಕೃತ್ಯ ನಡೆಸಿದ್ದಾರೆ ಎಂದು ಸಮಿತಿಯ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.ನಕ್ಸಲರನ್ನು ಸಮರ್ಥಿಸಿ ಕೊಂಡಿರುವ ಸಾಹಿತಿ ಗಿರೀಶ್ ಕಾರ್ನಾಡ್ ಮತ್ತು ನಾನೂ ಒಬ್ಬ ನಗರ ನಕ್ಸಲ್ ಎಂದಿರುವ ಸ್ವಾಮಿ ಅಗ್ನಿವೇಷ್ ಅವರುಗಳನ್ನು ಬಂಧಿಸಿ, ತಕ್ಷಣ ಕಾನೂನು ಕ್ರಮ ಜರುಗಿಸ ಬೇಕೆಂಬ ಮನವಿ ಪತ್ರವನ್ನು ಶಿರಸ್ತೇದಾರ್ ಶಶಿಧರ್ ಮೂಲಕ ಗೃಹ ಸಚಿವರಿಗೆ ಸಲ್ಲಿಸಲಾಯಿತು. ಈ ಸಂದರ್ಭ ಸಮಿತಿಯ ಪದಾಧಿಕಾರಿಗಳಾದ ಸೋಮೇಶ್, ಕಿಬ್ಬೆಟ್ಟ ಮಧು, ರಮೇಶ್, ಆನಂದ್, ಲಕ್ಷ್ಮೀಶ್, ಪಿ. ಮಧು, ಪ್ರಮೋದ್, ಶ್ರೀಕಾಂತ್, ಶರಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.