ಮಡಿಕೇರಿ, ಸೆ. 19: ಪ್ರಜಾಸತ್ಯ ದಿನಪತ್ರಿಕೆ ಬಳಗದಿಂದ ಬುಧವಾರ ನಗರದ ರೋಟರಿ ಸಭಾಂಗಣದಲ್ಲಿ ಸಂತ್ರಸ್ತ ಯುವ ಜನರಿಗಾಗಿ ಏರ್ಪಡಿಸಲಾಗಿದ್ದ ಉದ್ಯೋಗ ಮೇಳದಲ್ಲಿ 400 ಕ್ಕೂ ಹೆಚ್ಚು ಯುವ ಜನರು ಪಾಲ್ಗೊಂಡಿದ್ದರು. ಉದ್ಯೋಗ ಮೇಳಕ್ಕೂ ಮೊದಲು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಜಾಸತ್ಯ ದಿನಪತ್ರಿಕೆಯ ಸಂಪಾದಕ ಡಾ. ನವೀನ್ ಕುಮಾರ್ ಅವರು ಕಾಯಕವೇ ಕೈಲಾಸವೆಂದು ಜಗಜ್ಯೋತಿ ಬಸವಣ್ಣ ನುಡಿದಿರುವಂತೆ, ಕಾಯಕದಿಂದಲೇ ಸಂತಸ ಅನುಭವಿಸಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಉದ್ಯೋಗ ಅವಶ್ಯಕ. ಇದರಿಂದ ಆತ್ಮ ಸಂತೃಪ್ತಿಯ ಬದುಕು ಕಂಡುಕೊಳ್ಳಬೇಕಿದೆ ಎಂದರು.
ದುಃಖದ ಸಂದರ್ಭದಲ್ಲಿ ಸಾಂತ್ವನ ಮಾತು ಹೇಳುವದು ಅಗತ್ಯ. ಆದರೆ ಅನುಕಂಪದಿಂದಲೇ ಎಲ್ಲವನ್ನೂ ಗಳಿಸಲು ಸಾಧ್ಯವಿಲ್ಲ. ಲೌಕಿಕ ಸಂಪತ್ತು ಮತ್ತು ಸಂತಸ ಎರಡು ಅವಶ್ಯಕ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾಜ ನಿರ್ಮಾಣದಲ್ಲಿ ಸರ್ಕಾರದ ಜೊತೆ ಸರ್ಕಾರೇತರ ಸಂಸ್ಥೆಗಳು ಸಹ ಕೈಜೋಡಿಸಿದಾಗ ಅಭಿವೃದ್ಧಿ ಸಾಧ್ಯ. ಆ ದಿಸೆಯಲ್ಲಿ ಕಠಿಣ ಶ್ರಮದ ಜೊತೆಗೆ ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು. ಜಪಾನ್, ಚೀನಾದಂತಹ ರಾಷ್ಟ್ರಗಳಲ್ಲಿ ಪ್ರಕೃತಿ ವಿಕೋಪಗಳು ಸರ್ವೇ ಸಾಮಾನ್ಯವಾಗಿದೆ. ಆದರೂ ಆ ದೇಶದ ಜನರು ಯಾವುದಕ್ಕೂ ಧೃತಿಗೆಡದೆ ಬದುಕು ಕಟ್ಟಿಕೊಂಡು ಮುನ್ನಡೆಯುತ್ತಾರೆ ಎಂದು ಅವರು ಹೇಳಿದರು. ಸಂತ್ರಸ್ತರು ಮುಖ್ಯವಾಹಿನಿಗೆ ಬರುವ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರೆಸಬೇಕು ಎಂದರು.
ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರಿಗೆ ಬದುಕು ಕಟ್ಟಿಕೊಳ್ಳುವಂತಾಗಲು ಸಂಘ ಸಂಸ್ಥೆಗಳ ಸಹಕಾರ ಪಡೆದು ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸೋಣ ಎಂದು ‘ಪ್ರಜಾಸತ್ಯ’ದ ಚಿಂತನೆಯನ್ನು ಅವರು ಶ್ಲಾಘಿಸಿದರು.
(ಮೊದಲ ಪುಟದಿಂದ) ಪ್ರಕೃತಿಯ ಮುಂದೆ ಮಾನವ ಅತ್ಯಲ್ಪ, ಆದ್ದರಿಂದ ನೈತಿಕ ಧೈರ್ಯವನ್ನು ನೀಡುವದು ಅತ್ಯಗತ್ಯ. ಜೀವನದ ಮುಂದಿನ ಸವಾಲುಗಳನ್ನು ಎದುರಿಸಿ ಉತ್ತಮ ಬದುಕು ಕಟ್ಟಿಕೊಳ್ಳಬೇಕಿದೆ ಎಂದು ಅವರು ಸಲಹೆ ಮಾಡಿದರು.
ಸಾಹಿತಿ ನಾಗೇಶ್ ಕಾಲೂರು ಅವರು ಕಳೆದ ಆಗಸ್ಟ್ ತಿಂಗಳಲ್ಲಿ ಸುರಿದ ಮಹಾಮಳೆಯನ್ನು ‘ರಾಷ್ಟ್ರೀಯ ಮಹಾ ವಿಪತ್ತು’ ಎಂದು ಘೋಷಣೆ ಮಾಡುವಂತಾಗಬೇಕು ಎಂದು ಆಗ್ರಹಿಸಿದರು.
ಮಳೆಹಾನಿ, ಬರೆ ಕುಸಿತ ಎಂಬುದಕ್ಕಿಂತ ಮಹಾ ಉತ್ಪಾದ, ಜಲಸ್ಫೋಟ ಎಂದು ಹೇಳಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು. ನಿಜವಾದ ಸಂತ್ರಸ್ತರಿಗೆ ಸೌಲಭ್ಯಗಳು ದೊರೆಯುವಂತಾಗ ಬೇಕು ಎಂದು ಅವರು ಸಲಹೆ ಮಾಡಿದರು.
ಪ್ರತಿಯೊಬ್ಬರೂ ಸ್ವಉದ್ಯೋಗ ಕೈಗೊಳ್ಳಬೇಕು. ಇದರಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಉದ್ಯೋಗ ವಿನಿಮಯಾ ಧಿಕಾರಿ ಸಿ.ಜಗನ್ನಾಥ್ ಅವರು ಉದ್ಘಾಟನೆ ಬಳಿಕ ಮಾತನಾಡಿ ಪ್ರಕೃತಿ ವಿಕೋಪದಿಂದಾಗಿ ಹಲವು ಕುಟುಂಬ ಗಳು ನಿರಾಶ್ರಿತರಾಗಿ ಉದ್ಯೋಗ ಕಳೆದುಕೊಂಡಿದ್ದಾರೆ. ಆ ನಿಟ್ಟಿನಲ್ಲಿ ಉದ್ಯೋಗ ಮೇಳ ಹಮ್ಮಿಕೊಂಡಿ ರುವದು ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಅವರು ಮಾತನಾಡಿ, ಸಮಾಜಕ್ಕೆ ಒಳಿತಾಗುವ ದೃಷ್ಟಿಯಿಂದ ‘ಪ್ರಜಾಸತ್ಯ’ ಬಳಗ ಉತ್ತಮವಾದ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದರು.
ಹಲವು ಕಂಪನಿಗಳು ಉದ್ಯೋಗ ನೀಡಲು ಬಂದಿದ್ದು, ಕೆಲವು ಕಂಪನಿಗಳು ನೇರವಾಗಿ ಉದ್ಯೋಗ ನೀಡುತ್ತದೆ. ಕೆಲವು ಕಂಪನಿಗಳು ತರಬೇತಿ ನೀಡಿ ಸ್ವ ಉದ್ಯೋಗ ಕೈಗೊಳ್ಳುವಂತಾಗಲು ನೆರವು ನೀಡುತ್ತಾರೆ ಎಂದು ಅವರು ತಿಳಿಸಿದರು. ಧನಂಜಯ ನಿರೂಪಿಸಿದರು. ಮುರುಗೇಶ್ ಪ್ರಾರ್ಥಿಸಿ, ವಂದಿಸಿದರು.