ಮಡಿಕೇರಿ, ಸೆ. 19: ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದ ನಡುವೆ ಅನೇಕ ಕಡೆಗಳಲ್ಲಿ ಜನತೆ ಸಂಕಷ್ಟಕ್ಕೆ ಸಿಲುಕುವದರೊಂದಿಗೆ ಮನೆ, ಮಠಗಳನ್ನು ಕಳೆದುಕೊಂಡು ವಿದ್ಯುತ್ ಸಂಪರ್ಕವೂ ಇಲ್ಲದೆ ಕಾರ್ಗತ್ತಲೆಯಲ್ಲಿ ರಾತ್ರಿ ಕಳೆಯುವಂತಾಗಿ, ಸರಕಾರದಿಂದ ಈ ಸಂಬಂಧ ಉಚಿತ ಸೀಮೆಎಣ್ಣೆ ಒದಗಿಸಲಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಸರಕಾರದಿಂದ ಉಚಿತವಾಗಿ ಈ ವೇಳೆ ಆಹಾರದ ಕಿಟ್ಗಳನ್ನು ಕೂಡ ವಿತರಿಸಲಾಗಿದೆ.ಅದೇ ಆಹಾರ ಕಿಟ್ಗಳಲ್ಲಿ ಸಂಬಂಧಿಸಿದ ಚೀಲದೊಂದಿಗೆ ಪ್ರತ್ಯೇಕ ಕ್ಯಾನ್ಗಳಲ್ಲಿ ತಲಾ 5 ಲೀಟರ್ನಂತೆ ಉಚಿತವಾಗಿ ಸೀಮೆಎಣ್ಣೆಯನ್ನು ಪೂರೈಸಲಾಗಿದೆ ಎಂದು ಪ್ರಚುರಪಡಿಸಲಾಗಿದೆ. ಮಡಿಕೇರಿ ನಗರಸಭೆಯ ಮುಂಭಾಗದಲ್ಲಿ ನಾಲ್ಕಾರು ದಿನ ಸಾವಿರಾರು ಮಂದಿ ಸರದಿಯಲ್ಲಿ ಗಂಟೆಗಟ್ಟಲೆ ನಿಂತು ಈ ಆಹಾರ ಕಿಟ್ಗಳನ್ನು ಪಡೆದುಕೊಂಡಿದ್ದಾರೆ.
ಗ್ರಾಮೀಣ ಭಾಗಗಳಲ್ಲಿಯೂ ಆಯಾ ಗ್ರಾಮ ಪಂಚಾಯಿತಿಗಳ ಮುಖಾಂತರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಂದಾಯ ನಿರೀಕ್ಷಕ ಮತ್ತು ಆಹಾರ ಇಲಾಖೆ ನಿರೀಕ್ಷಕರು ಜಂಟಿಯಾಗಿ ಈ ಎಲ್ಲ ಸಾಮಗ್ರಿಗಳನ್ನು ಸಾರ್ವಜನಿಕರಿಗೆ ಅನ್ಯಾಯವಾಗದಂತೆ ವಿತರಿಸಲು ಸೂಚಿಸಲಾಗಿತ್ತು.
ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅಧ್ಯಕ್ಷತೆಯಲ್ಲಿ ಈ ಸಂಬಂಧ ಉನ್ನತ ಮಟ್ಟದ ಸಭೆಯನ್ನು ಕೂಡ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಇಲಾಖಾ ಅಧಿಕಾರಿಗಳಿಗೆ ಸಚಿವರು ಸ್ಪಷ್ಟ ನಿರ್ದೇಶನದೊಂದಿಗೆ, ಒಂದು ವೇಳೆ ಆಹಾರ ಪಡಿತರ ಚೀಟಿ ಇತ್ಯಾದಿ ದಾಖಲಾತಿ ಇಲ್ಲದಿದ್ದರೂ, ಮಾನವೀಯ ನೆಲೆಯಲ್ಲಿ ಪಡಿತರ ಸಹಿತ ಸೀಮೆಎಣ್ಣೆ ಪೂರೈಸುವಂತೆ ತಿಳಿ ಹೇಳಿದ್ದರು.
ಕವಡೆ ಕಿಮ್ಮತ್ತಿನ ಬೆಲೆಯಿಲ್ಲ: ಈ ಮಹತ್ವದ ತೀರ್ಮಾನ ಬಳಿಕವೂ ಇದುವರೆಗೆ ಅನೇಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾಕಷ್ಟು ಮಂದಿಗೆ ಉಚಿತ ಆಹಾರ ಕಿಟ್ಗಳೇ ಲಭಿಸಿಲ್ಲ. ಮಾತ್ರವಲ್ಲದೆ ಸೀಮೆಎಣ್ಣೆ ವಿತರಣೆಯೂ ಆಗಿಲ್ಲ. ಮೊನ್ನೆ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಕ್ಕಂದೂರು ಗ್ರಾ.ಪಂ.ಗೆ ಭೇಟಿ ನೀಡಿದ್ದಾಗ, ಮುಟ್ಲು, ಹಮ್ಮಿಯಾಲ ಹಾಗೂ ಇತರೆಡೆಗಳಿಗೆ ವಿತರಿಸಬೇಕಿದ್ದ ಸೀಮೆಎಣ್ಣೆಯ ನಾಲ್ಕೈದು ಡ್ರಂಗಳು ಪತ್ತೆಯಾಗಿತ್ತು.
(ಮೊದಲ ಪುಟದಿಂದ) ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮೀಣ ಭಾಗಗಳಿಗೆ ತಲಪಬೇಕಿದ್ದ ಸೀಮೆಎಣ್ಣೆಯನ್ನು ಸ್ವತಃ ಗಾಳಿಬೀಡು ಗ್ರಾ.ಪಂ. ಅಧ್ಯಕ್ಷರು ನಿನ್ನೆ ಮುಟ್ಲು, ಹಮ್ಮಿಯಾಲಕ್ಕೆ ತಾವೇ ತೆಗೆದುಕೊಂಡು ಹೋಗಿ ಕೊಟ್ಟಿದ್ದಾಗಿ ಅಲ್ಲಿನ ಗ್ರಾಮಸ್ಥರು ಬಹಿರಂಗಗೊಳಿಸಿದ್ದಾರೆ. ಮಡಿಕೇರಿ ನಗರ ಸಹಿತ ಹಲವೆಡೆ ಸೀಮೆಎಣ್ಣೆ ಲಭಿಸದೆ ಮಳೆ ದೂರವಾಗಿ ಬಿಸಿಲು ಕಾಣಿಸಿಕೊಂಡರೂ ಬವಣೆ ತಪ್ಪಿಲ್ಲವೆಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತದ್ವಿರುದ್ಧ ಹೇಳಿಕೆ: ಅನೇಕರು ‘ಶಕ್ತಿ’ಯೊಂದಿಗೆ ಸೀಮೆಎಣ್ಣೆ ಪೂರೈಕೆ ಸಂಬಂಧ ಅಸಮಾಧಾನ ವ್ಯಕ್ತಪಡಿಸುತ್ತಾ, ಜಿಲ್ಲೆಗೆ ಬಂದಿರುವ ಸೀಮೆಎಣ್ಣೆ ಕಾಳಸಂತೆಯಲ್ಲಿ ಮಾರಾಟಗೊಳ್ಳುತ್ತಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸರಕಾರದಿಂದ ಪೂರೈಸಿರುವ 5 ಲೀಟರ್ ಕ್ಯಾನ್ನಲ್ಲಿ ಕೇವಲ 3 ಲೀಟರ್ ಹಾಗೂ 4 ಲೀಟರ್ ಸೀಮೆಎಣ್ಣೆ ತುಂಬಿ ವಂಚಿಸಿರುವದಾಗಿ ಆರೋಪಿಸಿದ್ದಾರೆ.
ಈ ಬಗ್ಗೆ ಜಿಲ್ಲಾ ಆಹಾರ ಇಲಾಖೆ ಉಪನಿರ್ದೇಶಕ ಸದಾಶಿವಯ್ಯ ಬಳಿ ಅಭಿಪ್ರಾಯ ಕೇಳಿದಾಗ, ಗ್ರಾಹಕರಿಗೆ ನೀಡಿರುವ ಎಣ್ಣೆ ಕ್ಯಾನ್ಗಳು 6 ಲೀಟರ್ ಸಾಮಥ್ರ್ಯದ್ದಾಗಿದ್ದು, ತಲಾ 5 ಲೀಟರ್ನಂತೆ ಪ್ರತಿ ಕುಟುಂಬಕ್ಕೆ ಉಚಿತವಾಗಿ ಪೂರೈಸಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ಜಿಲ್ಲೆಗೆ 21 ಲಾರಿ ಸೀಮೆಎಣ್ಣೆ ಬದಲಿಗೆ ಕೇವಲ 9 ಲಾರಿ ಮಾತ್ರ ಪೂರೈಕೆಯಾಗಿದ್ದು, ಇನ್ನು 12 ಲಾರಿ (ಟ್ಯಾಂಕರ್) ಸೀಮೆಎಣ್ಣೆ ಬರಬೇಕಿದೆ ಎಂದು ಹೇಳಿಕೆ ನೀಡಿದ್ದಾರೆ.
5 ಲೀಟರ್ ಕ್ಯಾನ್: ಈ ಬಗ್ಗೆ ಇಲಾಖೆಯ ಕಿರಿಯ ಅಧಿಕಾರಿಗಳ ಸಹಿತ ಗ್ರಾ.ಪಂ. ಪ್ರಮುಖರು ‘ಶಕ್ತಿ’ಯೊಂದಿಗೆ ಮಾತನಾಡುತ್ತಾ, ಕೆಲವೆಡೆ ವ್ಯತ್ಯಾಸದ ಆರೋಪಗಳಿದ್ದು, ಕ್ಯಾನ್ ಸಾಮಥ್ರ್ಯ ಕೇವಲ 5 ಲೀಟರ್ ಮಾತ್ರವೆಂದು ಸ್ಪಷ್ಟಪಡಿಸಿದ್ದಾರೆ. ಇಲ್ಲಿ ಅಧಿಕಾರಿಗಳ ಹೇಳಿಕೆ ಮತ್ತು ಜನವಲಯದಲ್ಲಿ ದೂರುಗಳ ಬಗ್ಗೆ ಕೂಲಂಕಷ ತನಿಖೆಯೊಂದಿಗೆ ಸೀಮೆಎಣ್ಣೆ ಕಾಳಸಂತೆ ಮಾರಾಟವನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಬೇಕಿದೆ.
ನಗರಸಭೆಗೂ ಗೊತ್ತಿಲ್ಲವಂತೆ: ಮಡಿಕೇರಿ ನಗರಸಭೆ ಪ್ರಮುಖರ ಸಹಿತ ಯಾವೊಬ್ಬ ಸಿಬ್ಬಂದಿಗೂ ಸರಕಾರದಿಂದ ಇಲ್ಲಿನ ನಿವಾಸಿಗಳಿಗೆ ಸೀಮೆಎಣ್ಣೆ ಪೂರೈಕೆಯಾಗಿರುವ ಸಂಗತಿ ಗೊತ್ತಿಲ್ಲವಂತೆ. ಆಹಾರ ಕಿಟ್ಗಳಲ್ಲಿ ಮಾತ್ರ ಪ್ರತಿ ಕುಟುಂಬಕ್ಕೆ ಉಚಿತವಾಗಿ ಮತ್ತು ಪ್ರತ್ಯೇಕ ಕ್ಯಾನ್ಗಳಲ್ಲಿ ತಲಾ 5 ಲೀಟರ್ ಸೀಮೆಎಣ್ಣೆ ಪೂರೈಸಲಾಗಿದೆ ಎಂದು ಮುದ್ರಿಸಿದ್ದಾಗಿದೆ ಹೊರತು ನಗರ ವಾಸಿಗಳಿಗೆ ಎಣ್ಣೆಯೇ ಬಂದಿಲ್ಲವೆಂದು ಸಮರ್ಥಿಸಿಕೊಂಡಿದ್ದಾರೆ.
ಹೀಗಾಗಿ ‘ದೇವರು ಕೊಟ್ಟರೂ ಪೂಜಾರಿಬಿಡ’ ಎಂಬಂತೆ ಇಲ್ಲಿ ಕಷ್ಟಕಾಲದಲ್ಲಿ ಸರಕಾರ ದೊರಕಿಸಿಕೊಟ್ಟಿದ್ದ ಬೆಳಕಿನ ಭಾಗ್ಯದ ಸೀಮೆಎಣ್ಣೆ ಎಲ್ಲಿ ಹೋಯಿತು? ಎಂಬ ಪ್ರಶ್ನೆಗೆ ಜವಾಬ್ದಾರಿ ಯುತರೇ ಸ್ಪಷ್ಟನೆ ನೀಡಬೇಕಿದೆ.
-ಶ್ರೀಸುತ