ಮಡಿಕೇರಿ, ಸೆ. 18: ಕೊಡವ ಭಾಷೆಯಲ್ಲಿ ಬೈಬಲ್ ಪ್ರಕಟ ಮಾಡಿರುವದನ್ನು ಕೊಡವ ಮಕ್ಕಡ ಕೂಟ ಖಂಡಿಸಿದ್ದು, ಈ ಬಗ್ಗೆ ಸಂಬಂಧಿಸಿದವರು ಎಚ್ಚೆತ್ತುಕೊಂಡು ಆ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆಗ್ರಹಿಸಿದೆ.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಹಾಗೂ ಆಡಳಿತ ಮಂಡಳಿಯ ಪ್ರಮುಖರು ಖಂಡಿಸಿದ್ದು, ಕೊಡವ ಜನಾಂಗದವರು ಪ್ರಕೃತಿಯ ಆರಾಧಕರಾಗಿದ್ದು, ಕೊಡವರ ಎಲ್ಲ ಹಬ್ಬಗಳು ಭೂಮಿಗೆ ಸಂಬಂಧಿಸಿದ್ದಾಗಿದೆ. ಗುರು ಕಾರೋಣರನ್ನು ಪೂಜಿಸುವವರಾಗಿದ್ದೇವೆ. ಆದರೆ ಇತ್ತೀಚೆಗೆ ಕೊಡವ ಭಾಷೆಯಲ್ಲಿ ಬೈಬಲ್ ಅನ್ನು ಬಿಡುಗಡೆಗೊಳಿಸಿರುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ಆಗಸ್ಟ್ 14ರಿಂದ ಸತತ ಮಳೆಯಿಂದ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿ ಜನರು ಮನೆ, ಮಠ ಎಲ್ಲವನ್ನೂ ಕಳೆದುಕೊಂಡು ಬೀದಿ ಪಾಲಾಗಿದ್ದರು. ಇದೇ ಅವಧಿಯನ್ನು ಕೆಲವರು ಬಂಡವಾಳ ಮಾಡಿಕೊಂಡು ಅಮಾಯಕ ಜನರನ್ನು ಹಾದಿ ತಪ್ಪಿಸುವ ಉದ್ದೇಶದಿಂದ ಕೊಡವ ಭಾಷೆಯಲ್ಲಿ ಬೈಬಲ್ ಹೊರ ತಂದಿದ್ದಾರೆ. ಕೊಡವರು ಈ ಬಗ್ಗೆ ಎಚ್ಚರ ವಹಿಸುವಂತೆ ತಿಳಿಸಿದ್ದಾರೆ.

ಕೊಡವ ಭಾಷೆಯಲ್ಲಿ ಪ್ರಕಟವಾಗಿರುವ ಬೈಬಲ್ ಅನ್ನು ಆದಷ್ಟು ಕೂಡಲೇ ಸಂಬಂಧಿಸಿದವರು ಮುಟ್ಟುಗೋಲು ಹಾಕಿಕೊಳ್ಳಬೇಕು. ಇಲ್ಲದಿದ್ದಲ್ಲಿ ಕೊಡವ ಜನಾಂಗದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದ್ದಾರೆ.

ತಮಿಳು ಕ್ರಿಶ್ಚಿಯನ್, ಮಲಿಯಾಳಿ ಕ್ರಿಶ್ಚಿಯನ್ ಇರುತ್ತಾರೆ. ಇಂತವರಿಗೆ ಅವರ ಭಾಷೆಯಲ್ಲಿ ಬೈಬಲ್‍ನ ಅವಶ್ಯಕತೆ ಇದೆ. ಆದರೆ ಕೊಡವ ಭಾಷೆಯಲ್ಲಿ ಬೈಬಲ್ ಪ್ರಕಟ ಮಾಡಿ ಕೊಡವರನ್ನು ಮತಾಂತರ ಮಾಡುವ ಹುನ್ನಾರಕ್ಕೆ ಯತ್ನಿಸಲಾಗಿದೆ ಎಂದು ಆರೋಪಿಸಿದ್ದಾರೆ.