ವೀರಾಜಪೇಟೆ, ಸೆ. 18: ವೀರಾಜಪೇಟೆಯಿಂದ ಕೊಡಗು-ಕೇರಳ ಗಡಿ ಪ್ರದೇಶವಾದ ಮಾಕುಟ್ಟಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 32ಆಸನದ ಮಿನಿ ಬಸ್ಸು ಮಾರ್ಗವನ್ನು ಇಂದಿನಿಂದ ಆರಂಭಿಸಲಾಗಿದೆ.
ಹಾನಿಗೊಳಗಾದ ಅಂತರರಾಜ್ಯ ಹೆದ್ದಾರಿ ಮಾಕುಟ್ಟ ರಸ್ತೆಯ ದುರಸ್ತಿಗೆ ಇನ್ನೂ ಆರು ತಿಂಗಳ ಕಾಲಾವಕಾಶ ಬೇಕಾಗಿರುವದರಿಂದ ಕೊಡಗು-ಕೇರಳ ಗಡಿಪ್ರದೇಶದ ನಿವಾಸಿಗಳು ಹಾಗೂ ಪ್ರಯಾಣಿಕರ ಬೇಡಿಕೆಯ ಮೇರೆಗೆ ಸಾರಿಗೆ ಸಂಸ್ಥೆಯ ಮಡಿಕೇರಿ ಡಿಪೋದಿಂದ ಈ ವ್ಯವಸ್ಥೆ ಮಾಡಲಾಗಿದೆ.
ನಿನ್ನೆ ದಿನ ಸಾರಿಗೆ ಸಂಸ್ಥೆಯ ಮಡಿಕೇರಿ ಡಿಪೋದ ವ್ಯವಸ್ಥಾಪಕರು, ಅವರೊಂದಿಗೆ ತಾಂತ್ರಿಕ ಸಿಬ್ಬಂದಿಗಳ ತಂಡ ಮಾಕುಟ್ಟ ಪ್ರದೇಶದವರೆಗೆ ತೆರಳಿ ಪರಿಶೀಲಿಸಿದ ನಂತರ ಇಂದಿನಿಂದ ಮಿನಿ ಸಾರಿಗೆ ಬಸ್ಸನ್ನು ಅಂತರರಾಜ್ಯ ಹೆದ್ದಾರಿಯ ಮಾಕುಟ್ಟ ಪ್ರದೇಶಕ್ಕೆ ಕಳುಹಿಸಲು ನಿರ್ಧರಿಸಿತು.
ಮಾಕುಟ್ಟದ ಗಡಿಯಿಂದ ಕೇರಳದ ಕೂಟುಪೊಳೆ, ಇರಿಟ್ಟಿ ಮಾರ್ಗವಾಗಿ ಖಾಸಗಿ ಹಾಗೂ ಕೇರಳ ಸಾರಿಗೆ ಸಂಸ್ಥೆಯ ಬಸ್ಸುಗಳು ಹೇರಳವಾಗಿ ಸಂಚರಿಸುತ್ತಿರುವದರಿಂದ ಕೊಡಗಿನ ಗಡಿಯಿಂದ ಕೇರಳವನ್ನು ಸಂಪರ್ಕಿಸಲು ಯಾವದೇ ಅಡಚಣೆಯಾಗುವದಿಲ್ಲ. ಈ ಮಿನಿ ಬಸ್ಸು ಮಾಕುಟ್ಟದ ಗಡಿಯಲ್ಲಿರುವ ಕೇರಳ ಬಸ್ಸು ನಿಲ್ದಾಣದವರೆಗೂ ತಲಪಲಿದೆ.
ಪ್ರತಿ ದಿನ ನಿಗದಿತ ವೇಳೆಯಲ್ಲಿ ಎರಡು ಮಿನಿ ಬಸ್ಸುಗಳು ಮೂರು ಬಾರಿ ಮಾಕುಟ್ಟದ ಗಡಿಗೆ ಹೋಗಿ ಬರಲಿದೆ. ಜಿಲ್ಲಾಡಳಿತದ ಬೇಡಿಕೆ ಮೇರೆಗೆ ಕೊಡಗು ಕೇರಳ ಅಂತರರಾಜ್ಯ ಹೆದ್ದಾರಿಯ ಗಡಿಗಳಿಗೆ ಬಸ್ಸು ಸೌಕರ್ಯ ವ್ಯವಸ್ಥೆಗೊಳಿಸಲಾಗಿದೆ ಎಂದು ಸಾರಿಗೆ ಸಂಸ್ಥೆಯ ಪುತ್ತೂರು ವಿಭಾಗದ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.