ಸೋಮವಾರಪೇಟೆ,ಸೆ.18: ಪ್ರಕೃತಿ ವಿಕೋಪಕ್ಕೆ ಒಳಗಾದ ಜಿಲ್ಲೆಯ ಸಂತ್ರಸ್ತರಿಗೆ ರಾಜ್ಯ ಸರ್ಕಾರದಿಂದ ವಿತರಿಸುತ್ತಿರುವ ವಿಶೇಷ ಅನ್ನಭಾಗ್ಯ ಯೋಜನೆಯ ಅಕ್ಕಿಯಲ್ಲಿ ಹುಳುಗಳು ಉತ್ಪತ್ತಿಯಾಗಿ ರುವದು ಕಂಡುಬಂದಿದೆ.
ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಅನ್ನಭಾಗ್ಯ ಯೋಜನೆಯ ವತಿಯಿಂದ ಪಡೆದುಕೊಂಡ ಅಕ್ಕಿಯಲ್ಲಿ ಹುಳಹುಪ್ಪಟೆಗಳು ಕಂಡುಬಂದಿದ್ದು, ಈ ಬಗ್ಗೆ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಗುವದು ಎಂದು ಕಲ್ಕಂದೂರು ಗ್ರಾಮದ ಕೆ.ಹೆಚ್. ತಿಮ್ಮಯ್ಯ ಹೇಳಿದ್ದಾರೆ.
ಸಂತ್ರಸ್ತರಾಗಿರುವ ಮಂದಿಗೆ ಸರ್ಕಾರದಿಂದ 10 ಕೆ.ಜಿ. ಅಕ್ಕಿ, ತೊಗರಿಬೇಳೆ, ಸಕ್ಕರೆ, ಉಪ್ಪು, ತಾಳೆ ಎಣ್ಣೆ, 5 ಲೀಟರ್ ಸೀಮೆ ಎಣ್ಣೆ ವಿತರಿಸಲಾಗುತ್ತಿದ್ದು, ನಮಗೆ ದೊರಕಿದ ಅಕ್ಕಿಯಲ್ಲಿ ಹುಳುಗಳು ಕಂಡುಬಂದಿವೆ ಎಂದು ತಿಮ್ಮಯ್ಯ ತಿಳಿಸಿದ್ದಾರೆ.