ಮಡಿಕೇರಿ, ಸೆ. 18: ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿರುವ ಗ್ರಾಮಗಳ ರೈತ ಸಹಕಾರಿ ಗಳ ಎಲ್ಲ ಸಾಲವನ್ನು ಸರಕಾರ ಮನ್ನಾಗೊಳಿಸುವದ ರೊಂದಿಗೆ ಇತರ ಎಲ್ಲ ಕಡೆಯ ರೈತರ ಬೆಳೆ ಸಾಲವನ್ನು ಮನ್ನಾ ಮಾಡಬೇಕೆಂದು ಇಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನ ವಾರ್ಷಿಕ ಮಹಾಸಭೆಯಲ್ಲಿ ನಿರ್ಣಯಿಸಿ ಈ ಸಂಬಂಧ ಮುಖ್ಯ ಮಂತ್ರಿ ಬಳಿ ನಿಯೋಗ ತೆರಳಲು ನಿರ್ಧರಿಸಲಾಗಿದೆ.
ಇಲ್ಲಿನ ಕೊಡವ ಸಮಾಜದಲ್ಲಿ ಜರುಗಿದ ಬ್ಯಾಂಕ್ನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ಬಿ.ಡಿ. ಮಂಜುನಾಥ್ ವಹಿಸುವದರೊಂದಿಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇತರ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದ ಸಂತ್ರಸ್ತರ ಕುಟುಂಬಗಳಿಗೆ ಬ್ಯಾಂಕ್ ವ್ಯವಸ್ಥೆಯಡಿ ಪ್ರತ್ಯೇಕ ನಿಧಿ ಸ್ಥಾಪಿಸಿ, ಅದನ್ನು ನೇರವಾಗಿ ಬ್ಯಾಂಕ್ ಮುಖಾಂತರ ನೊಂದವರಿಗೆ ಕಲ್ಪಿಸುವಂತೆಯೂ, ಡಿವಿಡೆಂಡ್ ಮೊತ್ತವನ್ನು ಶೇ. 10 ರಿಂದ 12ಕ್ಕೆ ಹೆಚ್ಚಿಸುವದರೊಂದಿಗೆ, ಶೇ. 6ನ್ನು ಪ್ರಾಥಮಿಕ ಬ್ಯಾಂಕ್ಗಳಿಗೂ, ಶೇ. 6ನ್ನು ಸಂತ್ರಸ್ತರ ನಿಧಿಗೂ ಕಲ್ಪಿಸಬೇಕೆಂದು ನಿರ್ಧಾರ ತೆಗೆದುಕೊಳ್ಳಲಾಯಿತು.
ಜಾಥಾ ಹಮ್ಮಿಕೊಳ್ಳಲು ನಿರ್ಧಾರ: ಕೊಡಗಿನ ಸಹಕಾರಿಗಳ ಸಂಕಷ್ಟ ದೊಂದಿಗೆ, ಪ್ರಾಕೃತಿಕ ವಿಕೋಪದಿಂದ ತತ್ತರಿಸಿರುವ ರೈತರ ಸಂಕಷ್ಟವನ್ನು ಸರಕಾರಕ್ಕೆ ಮನವರಿಕೆ ಮಾಡಿಕೊಡುವ ದಿಸೆಯಲ್ಲಿ ಜಾಥಾದೊಂದಿಗೆ ತೆರಳಬೇಕೆಂಬ ಸಲಹೆಯೂ ಸಭೆಯಲ್ಲಿ ವ್ಯಕ್ತಗೊಂಡು, ಆ ಬಗ್ಗೆ ಒಮ್ಮತದ ನಿರ್ಧಾರಕ್ಕೆ ಬರಲಾಯಿತು.
ಪ್ರಸಕ್ತ ಸಂಭವಿಸಿರುವ ಪ್ರಾಕೃತಿಕ ದುರಂತದಿಂದ ಕೊಡಗಿನ ಸಹಕಾರ ಸಂಘಗಳೊಂದಿಗೆ ರೈತರು-ಬೆಳೆಗಾರರು ಸೇರಿದಂತೆ ಜನಸಾಮಾನ್ಯರ ಬದುಕು ತೊಂದರೆಯಲ್ಲಿರುವ ಕಾರಣದಿಂದ ಬಲವಂತದ ಸಾಲ ಮರುಪಾವತಿ ಇತ್ಯಾದಿಗೆ ಮುಂದಾಗದಂತೆ ಒಕ್ಕೊರಲಿನ ಆಗ್ರಹ ಕೇಳಿಬಂತು.
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿವೇಶನ ಕಟ್ಟಡವನ್ನು ಸಹಕಾರ ಸಗಟು ಮಾರಾಟ ಮಳಿಗೆಗೆ ಮಾರಾಟ ಗೊಳಿಸುವದು ಸೇರಿದಂತೆ ಸಭೆಯಲ್ಲಿ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು. ಬ್ಯಾಂಕ್ ಉಪಾಧ್ಯಕ್ಷ ಹರೀಶ್ ಪೂವಯ್ಯ ಸೇರಿದಂತೆ ಆಡಳಿತ ಮಂಡಳಿ ನಿರ್ದೇಶಕರು, ಅಧಿಕಾರಿಗಳು ವಿವಿಧ ವಿಎಸ್ಸೆಎಸ್ಸೆನ್ ಪದಾಧಿಕಾರಿಗಳ ಸಹಿತ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದರು.