ಸೋಮವಾರಪೇಟೆ,ಸೆ.18: ಪರಿಹಾರ ಹಣವನ್ನು ದೌರ್ಜನ್ಯದ ಮೂಲಕ ವಾಪಸ್ ಪಡೆದು, ಜಾತಿ ನಿಂದನೆ ಮಾಡಿರುವವರನ್ನು ಬಂಧಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು, ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಸಂತ್ರಸ್ತರು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಸಗೋಡು ಗ್ರಾಮದ ಸುಧೀರ್ ಮತ್ತು ಶೈಲಾ ದಂಪತಿಗಳು, ಕಳೆದ ತಾ. 3ರಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರು ತಮಗೆ 20 ಸಾವಿರ ಪರಿಹಾರ ನೀಡಿದ್ದು, ಇದನ್ನು ಕರವೇ ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಮತ್ತು ಅವರ ಪತಿ ಸುರೇಶ್ ಅವರುಗಳು ಬಲವಂತವಾಗಿ ಕಿತ್ತುಕೊಂಡಿದ್ದಾರೆ. ಇನ್ನೂ ಹೆಚ್ಚಿನ ಹಣ ನೀಡಿದ್ದಾರೆ ಎಂದು ಕಿರುಕುಳ ನೀಡಿ ಬಟ್ಟೆ ಬಿಟ್ಟಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದರು.
ಹಣವನ್ನು ತಾನೇ ಇಟ್ಟುಕೊಂಡಿದ್ದೇನೆ ಎಂದು ತಿಳಿದುಕೊಂಡು ಕರವೇ ಅಧ್ಯಕ್ಷ ದೀಪಕ್ ಅವರು ಹುಡುಕಾಟ ನಡೆಸುವಂತೆ ಸೂಚಿಸಿದ್ದರಿಂದ ತನ್ನ ಮೇಲೆ ದೌರ್ಜನ್ಯ ನಡೆಸಲಾಗಿದೆ. ರೂಪಾ ಮತ್ತು ಸುರೇಶ್ ಅವರು ಮನೆ ಕಟ್ಟಲು ಸಿಮೆಂಟ್ ಕೊಡಿಸುವದಾಗಿ ಕರೆತಂದು ತನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ. ರಾತ್ರಿ ಮನೆಗೆ ಬಂದು ಹಣಕ್ಕಾಗಿ ಪೀಡಿಸಿದ್ದಾರೆ ಎಂದು ದೂರಿದರು.
ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಇದುವರೆಗೆ ಯಾವದೇ ಕ್ರಮ ಕೈಗೊಂಡಿಲ್ಲ. ತಕ್ಷಣ ಅವರುಗಳನ್ನು ಬಂಧಿಸಿ ತಮಗೆ ನ್ಯಾಯ ದೊರಕಿಸಿಕೊಡಬೇಕು. ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದ ದಂಪತಿಗಳು, ತಾವು ಸುಳ್ಳು ದೂರು ನೀಡಿರುವದಾಗಿ ನಮ್ಮ ಮೇಲೆಯೇ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅಳಲುತೋಡಿಕೊಂಡರು.
ಕರ್ನಾಟಕ ರಕ್ಷಣಾ ವೇದಿಕೆಯ ಸಾಹಿತ್ಯ ಘಟಕದವರು ಪ್ರಕರಣದ ಹಾದಿ ತಪ್ಪಿಸುವ ಯತ್ನ ನಡೆಸುತ್ತಿದ್ದಾರೆ. ಆರೋಪಿಗಳನ್ನು ಅಮಾಯಕರೆಂದು ಬಿಂಬಿಸುವ ಪ್ರಯತ್ನ ನಡೆದಿದೆ. ನಿಜವಾದ ಸಂತ್ರಸ್ತರ ಪರವಾಗಿ ನಿಲ್ಲುವ ಬದಲು ಆರೋಪಿಗಳ ಪರ ನಿಲ್ಲುತ್ತಿರುವದು ಸರಿಯಲ್ಲ ಎಂದ ಶೈಲಾ ದಂಪತಿಗಳು, ದಲಿತ ಸಂಘಟನೆಗಳ ಒಕ್ಕೂಟದ ಸಹಕಾರದಿಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದರು. ಕರವೇ ಜಿಲ್ಲಾ ಹಾಗೂ ನಗರ ಘಟಕದವರು ನಮ್ಮನ್ನು ಸಂತೈಸಿದ್ದಾರೆ ಎಂದು ಇದೇ ಸಂದರ್ಭ ಹೇಳಿದರು. ಗೋಷ್ಠಿಯಲ್ಲಿ ಶೈಲಾ ಅವರ ತಾಯಿ ಸುನಂದ ಇದ್ದರು.