ಸೋಮವಾರಪೇಟೆ, ಸೆ. 17: ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಧಾರವಾಡದ ರಂಗಾಯಣದ ಸಹಯೋಗ ದೊಂದಿಗೆ ‘ಗಾಂಧಿ 150 ಒಂದು ರಂಗ ಪಯಣ’ ಕಾರ್ಯಕ್ರಮದ ಅಂಗವಾಗಿ ಬೊಳುವಾರು ಮಹಮ್ಮದ್ ಕುಂಞ ಅವರ “ಪಾಪು ಗಾಂಧಿ ಬಾಪು ಆದ ಕಥೆ” ಆಧರಿಸಿದ ರಂಗರೂಪಕ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಪ್ರದರ್ಶನಗೊಂಡಿತು.

ಬಾಪೂಜಿಯ ಬದುಕಿನ ಪ್ರಮುಖ ಘಟನಾವಳಿಗಳನ್ನು ಪರಿಚಯಿಸುವ ಪ್ರಯತ್ನದಲ್ಲಿ ಒಂದೂವರೆ ಗಂಟೆಗಳಲ್ಲಿ ರಂಗಾಯಣ ಕಲಾವಿದರು ಅಮೋಘ ಅಭಿನಯ ನೀಡಿದರು. ವಿಶೇಷವಾಗಿ ವಿದ್ಯಾರ್ಥಿ ಪ್ರೇಕ್ಷಕರನ್ನೇ ಉದ್ದೇಶ ವಾಗಿಟ್ಟುಕೊಂಡು ಸರಳವಾಗಿ ರಂಗರೂಪಕವನ್ನು ಕಟ್ಟಲಾಗಿದ್ದು, ರಂಗವಿನ್ಯಾಸ ಹಾಗೂ ಕಲಾವಿದರ ನಿರೂಪಣೆ ಉತ್ತಮವಾಗಿ ಮೂಡಿಬಂತು.

ನಾಟಕ ಪ್ರದರ್ಶನ ವೀಕ್ಷಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್, ಯೂತ್ ಫಾರ್ಮರ್ಸ್ ಫೆಡರೇಷನ್ ಅಧ್ಯಕ್ಷ ಶ್ರೀನಿಧಿ, ಉಪನ್ಯಾಸಕಿ ತಿಲೋತ್ತಮೆ, ನಾಟಕ ಹಾಗೂ ಕಲಾವಿದರ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.