ಕುಶಾಲನಗರ, ಸೆ. 17: ರಾಜ್ಯದ ಜನತೆ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ನಲುಗುತ್ತಿದ್ದರೂ ಪರಿಹಾರ ಕಾರ್ಯದ ಬಗ್ಗೆ ತಲೆಕೆಡಿಸಿಕೊಳ್ಳದೆ ಜನಪ್ರತಿನಿಧಿಗಳು ಮತ್ತು ರಾಜ್ಯ ಸರಕಾರ ಸಂಘರ್ಷದಲ್ಲಿ ಮಗ್ನವಾಗಿದೆ ಎಂದು ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಡಿ.ಎಚ್. ಪೂಜಾರ್ ಆರೋಪಿಸಿದ್ದಾರೆ.
ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಹಿಂದೆಂದೂ ಕಂಡರಿಯದ ಅತಿವೃಷ್ಟಿ, ಪ್ರಕೃತಿ ವಿಕೋಪಕ್ಕೆ ಒಳಗಾಗಿದೆ. ಉತ್ತರ ಕರ್ನಾಟಕ ಸೇರಿದಂತೆ ಕೆಲವು ಜಿಲ್ಲೆಗಳು ಬರಪೀಡಿತವಾಗಿವೆ. ಸಂಕಷ್ಟದಲ್ಲಿರುವ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ಪರಿಹಾರ ಕಲ್ಪಿಸಬೇಕಾದ ರಾಜ್ಯದ ಆಡಳಿತ ಯಂತ್ರ ಸಂಪೂರ್ಣ ನಿಷ್ಕ್ರಿಯ ಗೊಂಡಿದೆ ಎಂದು ಆರೋಪಿಸಿದರು. ಪರಸ್ಪರ ರಾಜಕೀಯ ಕೆಸರೆರಚಾಟ, ಲೋಕಸಭಾ ಚುನಾವಣೆ, ಅಧಿಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಮ್ಮಿಶ್ರ ಸರಕಾರ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದೆ. ಇನ್ನೊಂದೆಡೆ ಸರಕಾರವನ್ನು ಉರುಳಿಸುವ ಹುನ್ನಾರ ವಿರೋಧ ಪಕ್ಷದಿಂದ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಜನಹಿತ ಮರೆತಿರುವ ರಾಜ್ಯ ಸರಕಾರ ತನ್ನ ಜವಾಬ್ದಾರಿ ಅರಿತು ಸಂಕಷ್ಟದಲ್ಲಿರುವ ಜನರ ಸಮಸ್ಯೆಗೆ ಶೀಘ್ರವಾಗಿ ಶಾಶ್ವತ ಪರಿಹಾರ ಕಲ್ಪಿಸದಿದ್ದಲ್ಲಿ ಸಂಘದ ವತಿಯಿಂದ ರಾಜ್ಯದ ಎಲ್ಲೆಡೆ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಅವರು ಎಚ್ಚರಿಸಿದರು.
ಸಂತ್ರಸ್ಥರಿಗೆ ಈಗಾಗಲೆ ಘೋಷಿಸಿರುವ ಅವೈಜ್ಞಾನಿಕ ಪರಿಹಾರ ಕ್ರಮಗಳನ್ನು ಬದಲಾವಣೆಗೊಳಿಸ ಬೇಕು. ಘಟನೆಯಲ್ಲಿ ಮಡಿದವರಿಗೆ ರು 10 ಲಕ್ಷ, ಗಾಯಾಳುಗಳಿಗೆ ರೂ. 2 ಲಕ್ಷ, ಭೂಮಿ ಕಳೆದುಕೊಂಡವರಿಗೆ ಕನಿಷ್ಟ 2 ಎಕರೆ ಭೂಮಿ ಒದಗಿಸುವಲ್ಲಿ ಸರಕಾರ ಮುಂದಾಗಬೇಕೆಂದು ಅವರು ಒತ್ತಾಯಿಸಿದರು.
ರಾಜ್ಯ ಘಟಕದ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ಮಾತನಾಡಿ, ಸಂತ್ರಸ್ಥರಿಗೆ ರಾಜ್ಯದ ಮೂಲೆ ಮೂಲೆಗಳಿಂದ ಸಹಾಯಹಸ್ತ ದೊರೆತಿದೆ. ಉಳ್ಳವರು ಕೆಲವರು ಸಂತ್ರಸ್ತರ ಪರಿಹಾರ ಸಾಮಗ್ರಿಗಳನ್ನು ಕೊಳ್ಳೆ ಹೊಡೆದಿದ್ದಾರೆ. ಜೈಲು ಹಕ್ಕಿಗಳಂತೆ ಇರುವ ಸಂತ್ರಸ್ತರಿಗೆ ಆಶ್ರಯ ಕೇಂದ್ರಗಳಲ್ಲಿ ಮನೆಯ ವಾತಾವರಣ ನಿರ್ಮಿಸಿಕೊಡಬೇಕಿದೆ. ಕೂಲಿ ಕಾರ್ಮಿಕರೂ ಕೆಲಸವಿಲ್ಲದೆ ದಿನದೂಡುತ್ತಿದ್ದು ಇವರನ್ನು ಕೂಡ ಸಂತ್ರಸ್ತರ ಪಟ್ಟಿಗೆ ಸೇರಿಸಿ ಅಗತ್ಯ ಪರಿಹಾರ ಕಲ್ಪಿಸಬೇಕಿದೆ. ಆಶ್ರಯ ಕೇಂದ್ರಗಳಿಂದ ಸಂತ್ರಸ್ತರನ್ನು ಬಲವಂತವಾಗಿ ಬೇರೆಡೆಗೆ ಸಾಗಹಾಕುವ ಪ್ರಯತ್ನ ಕೆಲವು ಅಧಿಕಾರಿಗಳು ಮಾಡುತ್ತಿರುವದು ಖಂಡನೀಯ ವಿಚಾರ ಎಂದ ಅವರು, ಜಿಲ್ಲೆಯಲ್ಲಿರುವ 37 ಸಾವಿರ ಎಕರೆ ಸಿ ಮತ್ತು ಡಿ ಲ್ಯಾಂಡ್ ಮತ್ತು ಒತ್ತುವರಿಗೊಂಡಿರುವ ಸರಕಾರದ ಜಾಗಗಳನ್ನು ತೆರವುಗೊಳಿಸಿ ಸಂತ್ರಸ್ತರು, ಬಡವರಿಗೆ ಹಂಚಬೇಕೆಂದು ಅವರು ಆಗ್ರಹಿಸಿದರು.
ಗೋಷ್ಠಿಯಲ್ಲಿ ಸಂಘದ ಕೊಪ್ಪಳ ಜಿಲ್ಲಾ ಅಧ್ಯಕ್ಷ ಹೇಮರಾಜು, ಮೈಸೂರು ಜಿಲ್ಲಾಧ್ಯಕ್ಷ ಶ್ರೀನಿವಾಸ, ಜಿಲ್ಲಾ ಸಮಿತಿ ಅಧ್ಯಕ್ಷ ಎಸ್.ಆರ್.ಮಂಜುನಾಥ್, ಸದಸ್ಯ ಸಣ್ಣಪ್ಪ ಇದ್ದರು.