ಸುಂಟಿಕೊಪ್ಪ, ಸೆ. 16: ಕೊಡಗು ಫಾರ್ ಟುಮೋರೋ ಸಹಭಾಗಿತ್ವದಲ್ಲಿ ಕಾವೇರಿ ರಿವರ್ ಎಡ್ವಂಚರ್, ರೆಸ್ಕ್ಯೂ ತಂಡ, ದುಬಾರೆ ರ್ಯಾಪ್ಟಿಂಗ್, ಎವರ್ ಗ್ರೀನ್ ಕೌಂಟಿ ಬಿಟ್ಟಂಗಾಲ, ಮಾದಾಪುರ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳು ಮತ್ತು ಸ್ಥಳೀಯ ಗ್ರಾಮಸ್ಥರ ನೆರವಿನೊಂದಿಗೆ ‘ಕ್ಲೀನ್ ಕೂರ್ಗ್’ ಕಾರ್ಯಕ್ರಮದಡಿಯಲ್ಲಿ ಭಾನುವಾರ ಬೆಳಗ್ಗಿನಿಂದ ಸಮೀಪದ ಹರದೂರು ಹೊಳೆಯ ಶುಚಿತ್ವಕ್ಕೆ ಚಾಲನೆ ನೀಡಲಾಯಿತು. ಭಾನುವಾರ ಬೆಳಗ್ಗಿನಿಂದಲೇ ಸ್ಥಳೀಯ ಮೂರು ತೆಪ್ಪಗಳು, ದುಬಾರೆಯ ಬೋಟು ಮೂಲಕ ಹೊಳೆಯಲ್ಲಿ ಸಂಗ್ರಹವಾಗಿದ್ದ ಪ್ಲಾಸ್ಟಿಕ್ ಬಾಟಲ್ ಮತ್ತು ಇತರ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಅವುಗಳನ್ನು ಬೆಂಗಳೂರಿಗೆ ಮರು ಬಳಕೆಯ ವಸ್ತುಗಳಾಗಿ ಪರಿವರ್ತಿಸಲು ಕಳುಹಿಸಲಾಯಿತು. ಉಳಿದ ವಸ್ತುಗಳನ್ನು ಅಲ್ಲಿಯೇ ಸುಟ್ಟು ಹಾಕಲಾಯಿತು ಎಂದು ಕಾವೇರಿ ರಿವರ್ ಎಡ್ವಂಚರ್ ತಂಡ ಪತ್ರಿಕೆಗೆ ಮಾಹಿತಿ ನೀಡಿದರು.
ಕೊಡಗು ಫಾರ್ ಟುಮೋರೋ ಸಂಸ್ಥೆಯ ಕಾವೇರಪ್ಪ ಮಾತನಾಡಿ, ಕೊಡಗಿನಾದ್ಯಂತ ಶುಚಿಗೊಳಿಸುವ ಮೂಲಕ ಶುಚಿ ಕೊಡಗನ್ನಾಗಿ ಮಾಡುವ ಸಂಕಲ್ಪ ತಿಟ್ಟಿದ್ದೇವೆ. ಇದಕ್ಕೆ ಕೊಡಗಿನ ಸಮಸ್ತ ಜನರ ಸಹಕಾರ ಬೇಕಾಗಿದೆ ಎಂದರು.
ಕಾವೇರಿ ರಿವರ್ ಎಡ್ವಂಚರ್ ತಂಡದಲ್ಲಿ ಬಲ್ಲಟಿಚಂಡ ಮುರುಳಿ ಮಾದಯ್ಯ, ಲೋಕೇಶ್, ಸವಿನ್, ಸುರೇಂದರ್, ಪ್ರಕಾಶ್, ಸ್ಥಳೀಯ ತೆಪ್ಪದ ತಂಡದಲ್ಲಿ ಬಿ.ಆರ್. ಸುರೇಶ್, ನವೀನ್, ಶಿವ, ಸತೀಶ್, ರವಿ, ಚಂದನ್, ಕಿರಣ್, ಎವರ್ ಗ್ರೀನ್ ಕೌಂಟಿ ಬಿಟ್ಟಂಗಾಲ ತಂಡದಲ್ಲಿ ಬಜನ್ ಬೋಪಣ್ಣ ತಂಡ, ರೆಸ್ಕ್ಯೂ ತಂಡದಲ್ಲಿ ಪಾಡೆಯಂಡ ದೀಪಕ್ ಮತ್ತು ತಂಡ, ಮಾದಾಪುರ ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಸಿ.ಜಿ. ಮಂದಪ್ಪ, ಗ್ರಾಮಸ್ಥರು ಶುಚಿ ಕಾರ್ಯದಲ್ಲಿ ತೊಡಗಿಕೊಂಡರು.