ಸುಂಟಿಕೊಪ್ಪ,ಸೆ.16: ಐಗೂರು ಗ್ರಾಮದ ಸೋಮವಾರಪೇಟೆ- ಮಡಿಕೇರಿ ರಾಜ್ಯ ಹೆದ್ದಾರಿ ಬಳಿ ಇರುವ ಬಸ್ ತಂಗುದಾಣದಲ್ಲಿ ರಾತ್ರಿವೇಳೆ ಬಂದು ಮದ್ಯಸೇವಿಸಿ ಬೀಡಿ, ಸಿಗರೇಟ್, ಪ್ಲಾಸ್ಟಿಕ್, ಬಾಟಲಿಗಳನ್ನು ಪಾನ್‍ಪರಾಗನ್ನು ತಿಂದು ಬಸ್ ತಂಗುದಾಣದಲ್ಲೇ ಎಸೆದು ಸಾರ್ವಜನಿಕರ ಸ್ಥಳವನ್ನು ಅಶುಚಿತ್ವಗೊಳಿಸುತ್ತಿರುವದು ಮಾಮೂಲಿಯಾಗಿದೆ. ಈ ಬಗ್ಗೆ ಪತ್ರಿಕೆಯಲ್ಲಿ ವರದಿಯಾಗಿದ್ದರೂ ಗ್ರಾ.ಪಂ. ಸೇರಿದಂತೆ ಯಾರು ತಲೆಕೆಡಿಸಿಕೊಂಡಿರಲಿಲ್ಲ.

ಮಾದಾಪುರ ಗ್ರಾಮ ಪಂಚಾಯಿತಿಗೆ ಸೇರಿದ ಕಾರ್ಮಿಕರಾದ ರಾಮ ಎಂಬವರು ಐಗೂರಿಗೆ ಕೆಲಸಕ್ಕೆ ಬರುತ್ತಿದ್ದು, ಗಲೀಜಿನಿಂದ ಕೂಡಿದ ತಂಗುದಾಣದಲ್ಲಿ ಬೀಡಾಡಿ ದನಗಳು ಸಗಣಿ ಹಾಕಿ ಅನಾಗರಿಕರು ಮದ್ಯ ಸೇವಿಸಿ ಬಿಸಾಡಿದ ಪ್ಲಾಸ್ಟಿಕ್ ಬಾಟಲಿಗಳನ್ನು ಕಂಡು ಗುಡಿಸಿ ತೆಗೆದು ಬಸ್ ತಂಗುದಾಣವನ್ನು ಶುಚಿಗೊಳಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಪರಿಕಲ್ಪನೆಗೆ ಸಾಥ್ ನೀಡಿದ್ದಾರೆ.

ಈ ಬಗ್ಗೆ ರಾಮ ಅವರನ್ನು ಪ್ರಶ್ನಿಸಿದಾಗ ಪ್ರಧಾನಿ ನರೇಂದ್ರಮೋದಿ ಅವರ ಆಶಯದಂತೆ ದೇಶವನ್ನು ‘ಸ್ವಚ್ಛತೆಯೇ ಸೇವೆ’ ಸ್ವಚ್ಛ ಅಭಿಯಾನಕ್ಕೆ ಪೊರಕೆ ಹಿಡಿದು ಶುಚಿಗೊಳಿಸುವಾಗ ದೇಶದ ಶುಚಿತ್ವಕ್ಕೆ ಎಲ್ಲರ ಸಹಕಾರ ನೀಡುವಾಗ ಪ್ರತಿಯೊಬ್ಬರೂ ಇದನ್ನು ಮನಗಂಡು ಮನೆಯಿಂದಲೇ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದರು.