ಮೂರ್ನಾಡು, ಸೆ. 15: : ಜಿಲ್ಲೆಯಲ್ಲಿ ಇತ್ತೀಚೆಗೆ ಕಂಡ ಪ್ರಕೃತಿ ವಿಕೋಪದಿಂದ ಎಲ್ಲವನ್ನು ಕಳೆದುಕೊಂಡ ಐದು ಕುಟುಂಬಗಳಿಗೆ ಮೂರ್ನಾಡು ವಿದ್ಯಾಸಂಸ್ಥೆಯ ನಿಧಿಯಿಂದ ಪರಿಹಾರ ಧನ ನೀಡಲಾಯಿತು.

ಮೂರ್ನಾಡು ವಿದ್ಯಾಸಂಸ್ಥೆಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾದ ಪದವಿ ಕಾಲೇಜಿನ ಪೋಷಕರ ಮತ್ತು ಶಿಕ್ಷಕರ ಸಭೆ ಹಾಗೂ ನೆರೆ ಸಂತ್ರಸ್ತರ ಪರಿಹಾರ ಕಾರ್ಯಕ್ರಮವನ್ನು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ ಉದ್ಘಾಟಿಸಿದರು. ನೆರೆ ಸಂತ್ರಸ್ತರಾದ ಮುವ್ವತ್ತೋಕ್ಲುವಿನ ಮುಕ್ಕಾಟಿರ ತಂಗಮ್ಮ, ಇಗ್ಗೋಡ್ಲುವಿನ ಜಗ್ಗಾರಂಡ ಕಾವೇರಿಯಪ್ಪ, ಕಾಲೂರಿನ ಚಂಡೀರ ಕಾಳಪ್ಪ, ಮುಕ್ಕೋಡ್ಲು ಗ್ರಾಮದ ತಡಿಯಪ್ಪನ ಕುಶಾಲಪ್ಪ, ಮತ್ತು ಶಾಂತೆಯಂಡ ಉತ್ತಯ್ಯ ಕುಟುಂಬಗಳಿಗೆ ತಲಾ 20 ಸಾವಿರ ರೂ. ನಂತೆ, ಒಂದು ಲಕ್ಷ ಮೊತ್ತದ ಹಣವನ್ನು ನೇರವಾಗಿ ಈ ಕುಟುಂಬದ ಸದಸ್ಯರುಗಳಿಗೆ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ ವಿತರಿಸಿದರು. ನಂತರ ಮಾತನಾಡಿದ ಅವರು ಕೊಡಗಿನ ಜನತೆ ನಿಮ್ಮೊಂದಿಗೆ ಇರುತ್ತಾರೆ. ಎಲ್ಲವನ್ನು ಕಳೆದುಕೊಂಡ ಕುಟುಂಬಗಳು ಮನೋಸ್ಥೈರ್ಯವನ್ನು ಕಳೆದುಕೊಳ್ಳುವದು ಬೇಡ. ಕೊಡಗಿನ ಜನತೆಗೆ ಸ್ವಾಭಿಮಾನ ಹೆಚ್ಚು. ಆದರೆ ಈಗಿನ ಪರಿಸ್ಥಿತಿಯಲ್ಲಿ ಸಿಗುವದೆಲ್ಲ ವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ವಿದ್ಯಾಸಂಸ್ಥೆಯ ನಿರ್ದೇಶಕ ಪೆಮ್ಮುಡಿಯಂಡ ವೇಣು ಅಪ್ಪಣ್ಣ ನೆರೆ ಸಂತ್ರಸ್ತರ ಕುಟುಂಬ ಗಳನ್ನು ಸಭೆಗೆ ಪರಿಚಯಿಸಿದರು. ಪ್ರಕೃತಿ ವಿಕೋಪದಿಂದ ಮಡಿದ ಬಂಧುಗಳಿಗೆ ಒಂದು ನಿಮಿಷದ ಮೌನಾಚರಣೆ ಮಾಡಲಾಯಿತು.

ಪೋಷಕರ ಮತ್ತು ಶಿಕ್ಷಕರ ಸಭೆ : ಪದವಿ ಕಾಲೇಜಿನ ಪೋಷಕರ ಮತ್ತು ಶಿಕ್ಷಕರ ಸಂಘದ ಸಭೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ವಿದ್ಯಾಸಂಸ್ಥೆ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ ಸರ್ಕಾರದಿಂದ ಕಾಲೇಜಿಗೆ ಯಾವದೇ ಅನುದಾನ ಸಿಗುತ್ತಿಲ್ಲ. ವಿದ್ಯಾಸಂಸ್ಥೆಯು ಕ್ರೂಢೀಕರಿಸಿದ ಸಂಪನ್ಮೂಲದಿಂದ ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಈಗಾಗಲೇ ಪದವಿ ಕಾಲೇಜಿಗೆ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್‍ನ್ನು ಸಜ್ಜುಗೊಳಿಸಲಾಗಿದೆ. ಉತ್ತಮ ಗ್ರಂಥಾಲಯವಿದ್ದು ಅದನ್ನು ವಿದ್ಯಾರ್ಥಿಗಳು ಉಪಯೋಗಿಸಿ ಕೊಳ್ಳಬೇಕು. ವಿದ್ಯಾರ್ಥಿಗಳು ಕಾಲೇಜಿನ ಅವರಣದಲ್ಲಿ ಶಿಸ್ತು ಪರಿಪಾಲನೆ ಮಾಡಬೇಕು. ವಿದ್ಯೆಗೆ ಜಾತಿ ಇಲ್ಲ. ಇಲ್ಲಿ ಎಲ್ಲರೂ ಸರಿಸಮಾನರಾಗಿದ್ದಾರೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಮಾತನಾಡಿ ಈ ಗ್ರಾಮೀಣ ಮಟ್ಟದ ಕಾಲೇಜಿನಲ್ಲಿ ಪಾಸಾದ ಪ್ರತಿಯೋರ್ವ ವಿದ್ಯಾರ್ಥಿ ಗೂ ಪ್ರವೇಶಾವಕಾಶವಿದ್ದು, ಇಲ್ಲಿ ಶೇಕಡವಾರು ಅಂಕಗಳ ಮಿತಿಯಿಲ್ಲ. ಕಾಲೇಜಿಗೆ ಪ್ರವೇಶ ಪಡೆಯುವ ಅತಿ ಕಡಿಮೆ ಅಂಕಗಳಿಸಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೂ ಕೂಡ ವಿಶೇಷ ಕಾಳಜಿ ವಹಿಸಿ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ. ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಬಡುವಂಡ ಸುಬ್ರಮಣಿ, ಖಜಾಂಚಿ ಪುದಿಯೊಕ್ಕಡ ಸುಬ್ರಮಣಿ, ನಿರ್ದೇಶಕರಾದ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ನಂದೇಟಿರ ರಾಜಾ ಮಾದಪ್ಪ, ಎ.ಎಂ. ಶೈಲಾ, ಈರಮಂಡ ಸೋಮಣ್ಣ, ಪಳಂಗಂಡ ವಿಠಲ ಪೂವಯ್ಯ, ಪೋಷಕ ಮತ್ತು ಶಿಕ್ಷಕರ ಸಂಘದ ಉಪಾಧ್ಯಕ್ಷ ಪಿ.ಬಿ. ಕಾವೇರಪ್ಪ, ಕಾರ್ಯದರ್ಶಿ ಪಿ.ಎಂ. ಕಾವೇರಪ್ಪ, ಸಹ ಕಾರ್ಯದರ್ಶಿ ನಳಿನಿ, ಖಜಾಂಚಿ ಬೀನಾ ಮತ್ತು ಪ್ರಾಧ್ಯಾಪಕ ವೃಂದವರು ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ರಂಜಿನಿ ಪ್ರಾರ್ಥಿಸಿ, ಪ್ರಾಧ್ಯಾಪಕ ನಾಟೋಳಂಡ ನವೀನ್ ಸ್ವಾಗತಿಸಿದರು. ಬಿ.ಎಂ. ಕಲ್ಪನಾ ಪ್ರಾಸ್ತಾವಿಕ ನುಡಿಗಳನ್ನಾಡಿ, ಕೆ.ಜಿ. ಹರೀಶ್ ಕಾರ್ಯಕ್ರಮ ನಿರೂಪಿಸಿ, ಕೆ.ಸಿ. ಅರ್ಪಿತಾ ವಂದಿಸಿದರು.