ಮಡಿಕೇರಿ, ಸೆ. 10: ಕೊಡಗು ಜಿಲ್ಲೆಯಲ್ಲಿ ಬಹಳಷ್ಟು ಗ್ರಾಮಗಳು ಪ್ರಕೃತಿ ವಿಕೋಪದಿಂದ ಹಾನಿಗೊಳಗಾಗಿದ್ದು, ಭಾರೀ ಮಳೆಯಿಂದ ಬರೆ ಕುಸಿತದಿಂದ ಮನೆ ಕಳೆದುಕೊಂಡಿದ್ದು, ನಿರಾಶ್ರಿತ ಕೇಂದ್ರಗಳಲ್ಲಿ ವಾಸಿಸುತ್ತಿದ್ದಾರೆ. ಇಂತಹ ಸಂತ್ರಸ್ತರು ಸರ್ಕಾರದ ವಿವಿಧ ಇಲಾಖೆಯಿಂದ ನೀಡಲಾಗಿರುವ ಪ್ರಮಾಣ ಪತ್ರಗಳು ಹಾಗೂ ಇತರ ದಾಖಲೆಗಳನ್ನು ಕಳೆದುಕೊಂಡಿರುವ ಸಂಭವ ಹಿನ್ನೆಲೆ ಸಂತ್ರಸ್ತರಿಗೆ ಪ್ರಮಾಣ ಪತ್ರಗಳನ್ನು ಒದಗಿಸುವ ಉದ್ದೇಶದಿಂದ ಭೂಮಿ ನಿರ್ದೇಶನಾಲಯ hಣಣಠಿ://ತಿತಿತಿ.ಠಿಚಿಡಿihಚಿಡಿಚಿ.ಞಚಿಡಿಟಿಚಿಣಚಿಞಚಿ.gov.iಟಿ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದೆ.

ಆ ನಿಟ್ಟಿನಲ್ಲಿ ದಾಖಲೆಗಳನ್ನು ಕಳೆದುಕೊಂಡಂತಹ ಸಂತ್ರಸ್ತರ ಹೆಸರು ಮತ್ತು ಇತರೆ ದಾಖಲೆಗಳನ್ನು ಆಯಾಯ ಪರಿಹಾರ ಕೇಂದ್ರಗಳಿಗೆ ತೆರಳಿ ತಂತ್ರಾಂಶ ಅಳವಡಿಸಲು ಸಾಧ್ಯವಿದ್ದಲ್ಲಿ ದಾಖಲೆಗಳನ್ನು ಉಚಿತವಾಗಿ ನೀಡಲು ತಂಡ ರಚಿಸಲಾಗಿದ್ದು, ಈ ತಂಡವು ತಾ. 11 ರಿಂದ (ಇಂದಿನಿಂದ) ನಗರದ ಮೈತ್ರಿ ಸಭಾಂಗಣ, ಚೇಂಬರ್ ಆಫ್ ಕಾಮರ್ಸ್ ಕಟ್ಟಡ, ಕೆ.ಬಾಡಗದ ಜಿಲ್ಲಾ ಪಂಚಾಯಿತಿ ಭವನ, ಹಾಗೆಯೇ ತಾ. 12 ರಂದು ಆಜಾದ್ ನಗರ, ನಗರದ ಕರ್ಣಂಗೇರಿ ಪರಿಹಾರ ಕೇಂದ್ರ, ಬಾಲಮಂದಿರ, ತಾ. 14 ರಂದು ಕುಶಾಲನಗರದ ವಾಲ್ಮೀಕಿ ಭವನ, ತಾ. 15 ರಂದು ಸಂಪಾಜೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಕಲ್ಲುಗುಂಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಶಿಬಿರ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ತಿಳಿಸಿದ್ದಾರೆ.