ಕುಶಾಲನಗರ, ಸೆ. 9: ಬೈಲುಕೊಪ್ಪೆ ಟಿಬೇಟಿಯನ್ ನಿರಾಶ್ರಿತ ಕೇಂದ್ರದ ಹೊಲದಲ್ಲಿ ಜೀತದಾಳುಗಳನ್ನಾಗಿ ಇರಿಸಿಕೊಂಡು ಕೂಲಿ ಕೆಲಸ ಮಾಡುತ್ತಿದ್ದ ಹೊರ ಜಿಲ್ಲೆಗಳ 15 ಮಂದಿ ಕಾರ್ಮಿಕರನ್ನು ಮೈಸೂರು ಜಿಲ್ಲಾಡಳಿತ ರಕ್ಷಿಸಿದ ಪ್ರಕರಣ ನಡೆದಿದೆ. ಬೈಲುಕೊಪ್ಪೆಯ 10ನೇ ಕ್ಯಾಂಪ್‍ನಲ್ಲಿ ಟಿಬೇಟಿಯನ್ ವ್ಯಕ್ತಿಗಳಿಗೆ ಸೇರಿದ ಜಮೀನಿನಲ್ಲಿ ಈ ಘಟನೆ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಅರಸಿಕೆರೆ ಮೂಲದ ಉಮೇಶ್ ಎಂಬಾತನನ್ನು ಬೈಲುಕೊಪ್ಪ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಲವರು ನಾಪತ್ತೆ ಯಾಗಿರುವದಾಗಿ ತಿಳಿದು ಬಂದಿದೆ.
ಬೈಲುಕೊಪ್ಪೆ ವ್ಯಾಪ್ತಿಯಲ್ಲಿ ಸರಕಾರ ಟಿಬೇಟಿಯನ್ನರಿಗೆ ನೀಡಿದ ಹೊಲದಲ್ಲಿ ಅಂದಾಜು 35 ಎಕರೆ ಪ್ರದೇಶದಲ್ಲಿ ಶುಂಠಿ ಬೆಳೆ ಬೆಳೆಸಲಾಗಿದ್ದು ಈ ಸಂಬಂಧ ಧಾರವಾಡ, ಗದಗ, ಹಾವೇರಿ, ಮಂಡ್ಯ, ಕೊಪ್ಪಳ, ಬೆಂಗಳೂರು ಮತ್ತಿತರ ಕಡೆಗಳಿಂದ ಕಾರ್ಮಿಕರನ್ನು ಕರೆ ತರಲಾಗಿತ್ತು. ಕಳೆದ 5 ತಿಂಗಳಿನಿಂದ ಸುಮಾರು 25 ಮಂದಿಯನ್ನು ಜೀತದಾಳುಗಳ ರೀತಿ ಹೊಲದಲ್ಲಿ ಬಂಧಿಸಿಡಲಾಗಿತ್ತು. ಹಗಲು ರಾತ್ರಿ ಎನ್ನದೆ ಕಾರ್ಮಿಕರಿಂದ ಕೂಲಿ ಕೆಲಸ ಮಾಡಿಸುವದು, ನೆರೆಯ ಟಿಬೇಟಿಯನ್ ಹೊಲಗಳಿಗೆ ಕಾರ್ಮಿಕರನ್ನು ಪರಭಾರೆಯಾಗಿ ನೀಡುವದು ಅಲ್ಲದೆ ಕಾರ್ಮಿಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಬಗ್ಗೆ ಮಾಹಿತಿಗಳು ಹೊರಬಿದ್ದಿವೆ. ಇದುವರೆಗೆ ಕಾರ್ಮಿಕರಿಗೆ ಯಾವದೇ ರೀತಿಯ ವೇತನ ಕೂಡ ನೀಡಿಲ್ಲ ಎಂದು ತಿಳಿಸಿದ್ದಾರೆ. ಶುಂಠಿ ಹೊಲದ ಮಾಲೀಕ ಉಮೇಶ್ ಮತ್ತಿತರರ ಅತಿಯಾದ ದೌರ್ಜನ್ಯದಿಂದ ರೋಸಿಹೋದ ಕೆಲವು ಕಾರ್ಮಿಕರು ರಾತ್ರೋರಾತ್ರಿ ಓಡಿಹೋಗಿದ್ದು ಉಳಿದ 15 ಮಂದಿಯನ್ನು ಹೊಲದಲ್ಲೇ ಬಂಧಿಸಿರುವದಾಗಿ ಕಾರ್ಮಿಕ ಗದಗ್ ನಿವಾಸಿ ರಘು ಮಾಹಿತಿ ನೀಡಿದ್ದಾರೆ.
ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿಕೊಂಡ ರಘು ಮತ್ತಿತರರು ತಮ್ಮನ್ನು ಬಿಡಿಸಿಕೊಂಡು ಹೋಗುವ ನಿಟ್ಟಿನಲ್ಲಿ ಬೆಂಗಳೂರಿನ ಎನ್‍ಜಿಓ ಸಂಸ್ಥೆಗೆ ಮಾಹಿತಿ ನೀಡಿದ ಬೆನ್ನಲ್ಲೇ ಪ್ರಕರಣ ಬೈಲುಕೊಪ್ಪೆ ಶಿಬಿರದ ಉಸ್ತುವಾರಿ ಹುಣಸೂರು ಉಪ ವಿಭಾಗಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಕೂಡಲೆ ಕಾರ್ಯ ತತ್ಪರರಾದ ಪಿರಿಯಾಪಟ್ಟಣ ತಹಶೀಲ್ದಾರ್ ಮಹೇಶ್ ಮತ್ತು ಸಿಬ್ಬಂದಿಗಳ ತಂಡ ಬೈಲುಕೊಪ್ಪ ಪೊಲೀಸರ ಸಹಾಯದೊಂದಿಗೆ ಧಾಳಿ ಮಾಡಿ 15 ಮಂದಿ ಕಾರ್ಮಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೊಲದಲ್ಲಿ ಶುಂಠಿ ಬೆಳೆದ ಅರಸಿಕೆರೆಯ ನಿವಾಸಿ ಉಮೇಶ್ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ಕೈಗೊಂಡಿದ್ದಾರೆ. ತಾನು ಕೊಡಗು ಸೇರಿದಂತೆ ರಾಜ್ಯದ ವಿವಿಧೆಡೆ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ಪಡೆದು ಶುಂಠಿ ಕೃಷಿ ಮಾಡುತ್ತಿರುವದಾಗಿ ಮಾಹಿತಿ ನೀಡಿರುವ ಉಮೇಶ್, ಟಿಬೇಟಿಯನ್ ಶಿಬಿರದ ವ್ಯಾಪ್ತಿಯಲ್ಲಿ ಕಳೆದ 4 ವರ್ಷಗಳಿಂದ ಶುಂಠಿ ಬೆಳೆ ಬೆಳೆಯುತ್ತಿರುವದಾಗಿ ತಿಳಿಸಿದ್ದಾನೆ.
ಪ್ರಕರಣದ ಬಗ್ಗೆ ಬೈಲುಕೊಪ್ಪ ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ರಕ್ಷಿಸಲಾಗಿರುವ 15 ಮಂದಿ ಜೀತದಾಳುಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಕಾರ್ಮಿಕರಿದ್ದು ಕೆಲವರ ಮೈಮೇಲೆ ತೀವ್ರ ತರಹದ ಗಾಯಗಳು ಕೂಡ ಕಂಡುಬಂದಿದೆ. ಕಾರ್ಮಿಕನೊಬ್ಬ ಅಂಗವೈಕಲ್ಯತೆ ಹೊಂದಿದ್ದು ಹಲವರ ಸ್ಥಿತಿ ಕರುಣಾಜನಕವಾಗಿದೆ.
ಬೈಲುಕೊಪ್ಪೆಯಲ್ಲಿ ಟಿಬೇಟಿಯನ್ ನಿರಾಶ್ರಿತರ ಶಿಬಿರದಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಶುಂಠಿ, ಜೋಳ ಮತ್ತಿತರ ವಾಣಿಜ್ಯ ಬೆಳೆ ಬೆಳೆಯಲಾಗುತ್ತಿದ್ದು ಟಿಬೇಟಿಯನ್ನರು ಈ ಹೊಲಗಳನ್ನು ಇತರರಿಗೆ ಅಕ್ರಮವಾಗಿ ಗುತ್ತಿಗೆ ಆಧಾರದಲ್ಲಿ ನೀಡುತ್ತಿರುವದು ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿದೆ.
ಎಕರೆಯೊಂದಕ್ಕೆ 40 ರಿಂದ 75 ಸಾವಿರ ಪಡೆದು ಟಿಬೇಟಿಯನ್ನರು ಅಕ್ರಮವಾಗಿ ಹಣ ಗಳಿಸುತ್ತಿದ್ದು ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆದಲ್ಲಿ ನಿರಾಶ್ರಿತರ ಕೇಂದ್ರದಲ್ಲಿ ನಡೆಯುತ್ತಿರುವ ಭೂದಂಧೆ ವಹಿವಾಟು ಬೆಳಕಿಗೆ ಬರಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.