ಭಾಗಮಂಡಲ, ಸೆ. 8: ಕೊಡಗು ಪ್ರಗತಿಪರ ಜೇನು ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಹೊಸೂರು ಸತೀಶ್‍ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಮಹಾಸಭೆಯಲ್ಲಿ ಸತೀಶ್ ಕುಮಾರ್ ಮಾತನಾಡಿ, ಕಳೆದ ಐದು ವರ್ಷಗಳ ಅವಧಿಯಲ್ಲಿ ರೂ. 35 ಲಕ್ಷ ನಿವ್ವಳ ಲಾಭ ಹೊಂದಿದ್ದು, ಈ ಸಾಲಿನಲ್ಲಿ ರೂ. 55 ಲಕ್ಷದಷ್ಟು ಲಾಭಗಳಿಸಿದ್ದು, ಸಂಘದ ಎಲ್ಲಾ ಶಾಖೆಗಳನ್ನು ಕಂಪ್ಯೂಟರೀಕರಣ ಗೊಳಿಸಲಾಗುವದು. ಬೆಂಗಳೂರಿನಲ್ಲಿ ಸದ್ಯದಲ್ಲೇ ಇನ್ನೊಂದು ಮಳಿಗೆಯನ್ನು ತೆರೆಯಲಾಗುವದು. ಒಂದು ತಿಂಗಳೊ ಳಗಾಗಿ 25000 ನಾಡಕೋವಿ ತೋಟಗಳು ಬರಲಿವೆ.

ಗ್ರಾಹಕರು ನಿಯಮಾನುಸಾರ ಪಡೆದು ಕೊಳ್ಳಬಹುದು. ಕನಿಷ್ಟ ಮೊತ್ತದ ವ್ಯವಹಾರ ಮಾಡದೇ ಇರುವವರು ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಸದಸ್ಯ ನಾರಾಯಣಾಚಾರ್ ಮಾತನಾಡಿ, ಜೇನಿಗೆ ಬೆಂಬಲ ಬೆಲೆ ಯನ್ನು ಸಂಘದ ವತಿಯಿಂದ ರೈತರಿಗೆ ನೀಡಬೇಕು ಎಂದು ಒತ್ತಾಯಿಸಿದರು. ಸದಸ್ಯ ನಂಜುಂಡಪ್ಪ ಮಾತನಾಡಿ, ಕೊಡಗು ಈಗ ಸಂಕಷ್ಟಕ್ಕೊಳಗಾಗಿದೆ. ಸಂಘದ ವತಿಯಿಂದ ಸಂತ್ರಸ್ತರಿಗೆ ಹಣವನ್ನು ಸಂತ್ರಸ್ತ ನಿಧಿಗೆ ನೀಡಬೇಕು ಎಂದು ಮನವಿ ಮಾಡಿದರು. ಸಂಘದ ವತಿಯಿಂದ ರೂ. 2 ಲಕ್ಷ ಸಂತ್ರಸ್ತರಿಗೆ ನೀಡಲು ಮಹಾಸಭೆ ಒಪ್ಪಿಗೆ ನೀಡಿತು.

ಇದೇ ಸಂದರ್ಭ ಅತಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ನೀಡಲಾ ಯಿತು. ಸಂಘದ ಉಪಾಧ್ಯಕ್ಷ ಕೆದಂಬಾಡಿ ಮೋಹನ್, ಕಾರ್ಯ ನಿರ್ವಹಣಾಧಿಕಾರಿ ನಿಡ್ಯಮಲೆ ಅಶೋಕ್, ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.

ಧರ್ಮಸ್ಥಳ ಸಂಘದಿಂದ ನೆರವು

ಸೋಮವಾರಪೇಟೆ, ಸೆ. 8: ಭಾರೀ ಮಳೆಯಿಂದ ಹಾನಿಗೀಡಾದ ಮನೆಯ ಮಾಲೀಕರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರೂ. 10 ಸಾವಿರ ನೆರವು ಒದಗಿಸಲಾಯಿತು.

ಸಮೀಪದ ಬಜೆಗುಂಡಿ ಗ್ರಾಮದ ರಾಗಿಣಿ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಾಗಿದ್ದು, ಪ್ರಸಕ್ತ ಸಾಲಿನ ಮಹಾಮಳೆಗೆ ಇವರ ವಾಸದ ಮನೆ ಹಾನಿಗೀಡಾಗಿತ್ತು. ಯೋಜನೆಯಿಂದ ಬಿಡುಗಡೆಯಾದ ರೂ. 10 ಸಾವಿರ ಆರ್ಥಿಕ ನೆರವನ್ನು ಯೋಜನಾಧಿಕಾರಿ ವೈ. ಪ್ರಕಾಶ್, ಮೇಲ್ವಿಚಾರಕಿ ರೇವತಿ ಅವರುಗಳು ಫಲಾನುಭವಿಗೆ ವಿತರಿಸಿದರು.