ಕುಶಾಲನಗರ, ಆ, 30: ಹಾರಂಗಿ ಜಲಾಶಯದಿಂದ ಅವೈಜ್ಞಾನಿಕವಾಗಿ ನದಿಗೆ ನೀರು ಹರಿಸಿರುವ ಪ್ರಕರಣದ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳಿಗೆ ಆದೇಶ ನೀಡಲಾಗುವದು ಎಂದು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ತಿಳಿಸಿದ್ದಾರೆ. ಜಿಲ್ಲಾ ಪಂಚಾಯ್ತಿ ಸದಸ್ಯೆ ಕೆ.ಪಿ.ಚಂದ್ರಕಲಾ ಅವರು ಲೋಕಾಯುಕ್ತರಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಅಣೆಕಟ್ಟೆಯಿಂದ ಏಕಾಏಕಿ ಭಾರೀ ಪ್ರಮಾಣದ ನೀರು ಹರಿಸಿರುವದರಿಂದ ಕಾವೇರಿ ನದಿ ತಟದ ನೂರಾರು ಮನೆಗಳು ನೀರಿನಿಂದ ಆವೃತಗೊಳ್ಳಲು ಕಾರಣವಾಗಿದೆ. ಈ ಬಗ್ಗೆ ತನಿಖೆ ನಡೆಸಲು ಸೂಚಿಸಲಾಗುವದು ಎಂದು ತಿಳಿಸಿದ್ದಾರೆ.

ಜಲಾಶಯದ ನಿರ್ವಹಣೆಯನ್ನು ಸಂಬಂಧಿಸಿದ ಅಧಿಕಾರಿಗಳು ಸಮರ್ಪಕವಾಗಿ ನಿಭಾಯಿಸಲು ವಿಫಲರಾಗಿದ್ದು ಭಾರೀ ಪ್ರಮಾಣದ ನೀರು ನದಿಗೆ ಹರಿಸಿದ್ದೇ ಎಲ್ಲಾ ಆವಾಂತರಗಳಿಗೆ ಕಾರಣವಾಗಿದೆ. ಇದರಿಂದ ಕುಶಾಲನಗರ, ಕೂಡಿಗೆ, ಮುಳ್ಳುಸೋಗೆ,

(ಮೊದಲ ಪುಟದಿಂದ) ಕಣಿವೆ, ಗುಮ್ಮನಕೊಲ್ಲಿ ಮುಂತಾದೆಡೆ ಮನೆಗಳು ನೀರಿನಿಂದ ಆವೃತಗೊಂಡು ಜನಜೀವನ ಏರುಪೇರಾಗಿತ್ತು. ತಗ್ಗು ಪ್ರದೇಶದ ಕೃಷಿ ಜಮೀನು ಸಂಪೂರ್ಣ ನೀರಿನಿಂದ ತುಂಬಿ ರೈತಾಪಿ ವರ್ಗ ನಷ್ಟಕ್ಕೊಳಗಾಗಿ ದ್ದಾರೆ. ಈ ಸಂಬಂಧ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಚಂದ್ರಕಲಾ ಮನವಿಯಲ್ಲಿ ಕೋರಿದ್ದಾರೆ. ಕಾವೇರಿ ನದಿಯಿಂದ 12 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ 2005- 06ರಲ್ಲಿ ಅನುಮೋದನೆಗೊಂಡಿದ್ದು ಸುಮಾರು 12 ಕೋಟಿ ಯೋಜನೆ ವಿಫಲವಾಗಿದೆ. ಈ ಯೋಜನೆ ಸಮರ್ಪಕವಾಗಿಲ್ಲದೆ ಗ್ರಾಮಗಳಿಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ತನಿಖೆ ಕೈಗೊಳ್ಳಬೇಕು ಎಂದು ಚಂದ್ರಕಲಾ ಅವರು ಲೋಕಾಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.