ಮಡಿಕೇರಿ, ಆ. 30: ಕರ್ನಾಟಕದ ಸೌಂದರ್ಯ ನಾಡು ಕೊಡಗು ನೆರೆ ಹಾವಳಿಯಿಂದ ತತ್ತರಿಸಿ ಹೋಗಿದೆ. ಮತ್ತೆ ಕೊಡಗಿನ ನವನಿರ್ಮಾಣ ಆಗಬೇಕು. ಪ್ರವಾಹ ಪೀಡಿತ ಕೊಡಗು ಜಿಲ್ಲೆಗೆ ಪ್ರಧಾನ ಮಂತ್ರಿಯವರು ಬರಲೇಬೇಕು. ಅಲ್ಲಿನ ಜನರಿಗೆ ಪುನರ್ವಸತಿ ಕಲ್ಪಿಸಲು ಕೇಂದ್ರ ಸರಕಾರ 20 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕು. ಕೊಡಗನ್ನು ಮತ್ತೆ ಸುಂದರವಾಗಿ ನಿರ್ಮಾಣ ಮಾಡಬೇಕು. ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಸಿಕೊಡಬೇಕು, ಪ್ರಾಣ ಕಳೆದುಕೊಂಡವರಿಗೆ 25 ಲಕ್ಷ ರೂ. ಪರಿಹಾರ ಕೊಡಬೇಕು, ನಿರಾಶ್ರಿತರಿಗೆ ಕೂಡಲೇ ನೆರವು ನೀಡಬೇಕೆಂದು ಒತ್ತಾಯಿಸಲು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ತಾ. 31 ರಂದು (ಇಂದು) ಬೆಂಗಳೂರಿನಿಂದ ಕೊಡಗಿನವರೆಗೆ ಬೃಹತ್ ರ್ಯಾಲಿ ಏರ್ಪಡಿಸಲಾಗಿದೆ.

ಕೊಡಗಿಗೆ ಪ್ರಧಾನಮಂತ್ರಿ ಬರಲೇಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ವಾಟಾಳ್ ನಾಗರಾಜ್ ನಾಯಕತ್ವದಲ್ಲಿ ಸಂಜೆ 4 ಗಂಟೆಗೆ ಪ್ರತಿಭಟನೆ ನಡೆಯಲಿದೆ.

ರ್ಯಾಲಿಯಲ್ಲಿ ಅಖಿಲ ಕರ್ನಾಟಕ ಡಾ. ರಾಜ್‍ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು, ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕೆ.ಆರ್. ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರುಗಳಾದ ಶಿವರಾಮೇಗೌಡ, ಪ್ರವೀಣ್‍ಕುಮಾರ್ ಶೆಟ್ಟಿ, ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ್ ದೇವ್, ಕನ್ನಡ ಪರ ಹೋರಾಟಗಾರ ಹೆಚ್.ವಿ. ಗಿರೀಶ್‍ಗೌಡ ಸೇರಿದಂತೆ ಅನೇಕ ಕನ್ನಡ ಪರ ಸಂಘಟನೆಗಳು ಭಾಗವಹಿಸಲಿದ್ದಾರೆ.