ಮಡಿಕೇರಿ ಆ. 28: ಕೊಡಗಿನಲ್ಲಿ ಮಳೆ ಅನಾಹುತದಿಂದ ಪೂರ್ಣ ಪ್ರಮಾಣದ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರದಿಂದ ರೂ. 2 ಸಾವಿರ ಕೋಟಿ ನೆರವನ್ನು ಕೋರಲಾಗುತ್ತದೆ. ತಾ. 30ರಂದು ತಾನು ಮತ್ತು ಮುಖ್ಯಮಂತ್ರಿ ಅವರು ನವದೆಹಲಿಗೆ ತೆರಳಿ ಈ ಕುರಿತಾಗಿ ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸುತ್ತೇವೆ ಎಂದು ರಾಜ್ಯ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಇಂದು ಸಂಜೆ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿಯಿತ್ತರು
ರಾಜ್ಯ ಸರ್ಕಾರದಿಂದ ಮುಖ್ಯಮಂತ್ರಿಯವರು ಈಗಾಗಲೇ ರೂ. 100 ಕೋಟಿ ಮಂಜೂರು ಮಾಡಿದ್ದರು. ಇದೀಗ ಮತ್ತೆ ರೂ. 85 ಕೋಟಿಯನ್ನು ರಾಜ್ಯದಿಂದ ಬಿಡುಗಡೆ ಮಾಡಲಾಗುತ್ತಿದೆ ಎಂದು ನುಡಿದರು.ಪ್ರಸಕ್ತ ದಕ್ಷಿಣ ಕನ್ನಡದಲ್ಲಿ ಎರಡು ಕೇಂದ್ರಗಳೂ ಸೇರಿದಂತೆ ಜಿಲ್ಲೆಯಲ್ಲಿ 25 ಸಂತ್ರಸ್ತ ಕೇಂದ್ರಗಳಿದ್ದು 2917 ಮಂದಿ ನೆಲೆಸಿದ್ದಾರೆ. ಸಂತ್ರಸ್ತರಿಗೆ ಅಗತ್ಯವಾದ ದಾಖಲಾತಿಗಳನ್ನು ಶೀಘ್ರದಲ್ಲಿಯೇ ಕೊಡಲು ಕಂದಾಯ, ಲೋಕೋಪಯೋಗಿ ಇಲಾಖೆಗಳಲ್ಲಿ ಅಧಿಕ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಸಂತ್ರಸ್ತರ ಪೈಕಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕೂಡ ಬೆಂಗಳೂರು ಮತ್ತು ಮಂಗಳೂರು ವಿಭಾಗದಲ್ಲಿ ಕಲಿಯುತ್ತಿದ್ದು, ಎಲ್ಲವನ್ನು ಕಳೆದುಕೊಂಡ ಕುಟುಂಬದವರಿದ್ದರೆ ಅಂತವರಿಗೆ ಈ ಉನ್ನತ ಶಿಕ್ಷಣಕ್ಕೂ ಸರ್ಕಾರದಿಂದ ನೆರವು ನೀಡಲು ತೀರ್ಮಾನಿಸಲಾಗಿದೆ ಎಂದು ದೇಶ್‍ಪಾಂಡೆ ಆಶ್ವಾಸನೆಯಿತ್ತರು.
ಜಿಲ್ಲೆಯಲ್ಲಿ 183 ಮನೆಗಳು ಅತಿವೃಷ್ಟಿಯಿಂದಾಗಿ ಪೂರ್ಣವಾಗಿ ಕುಸಿದಿದ್ದು, 934 ಮನೆಗಳು ಭಾಗಶ ಕುಸಿದಿವೆ ಎಂದರು.
ರಾಜ್ಯ, ರಾಷ್ಟ್ರ ಹೆದ್ದಾರಿಗಳ ದುರಸ್ತಿಗೆ ಪರಿಣಿತರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿಯಿತ್ತರು.