ವೀರಾಜಪೇಟೆ, ಆ. 27: ಕೊಡಗು ಜಿಲ್ಲೆ ಪ್ರಕೃತಿ ವಿಕೋಪಕ್ಕೆ ತುತ್ತಾದ ಕಾರಣ ಐತಿಹಾಸಿಕ ಗೌರಿಗಣೇಶೋತ್ಸವವನ್ನು ಆಡಂಬರ ವಿಲ್ಲದೆ ಸಿಡಿಮದ್ದು ಮನರಂಜನೆ ಕಾರ್ಯಕ್ರಮಗಳಿಲ್ಲದೆ ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ‘ವೀರರಾಜೇಂದ್ರಪೇಟೆ ಐತಿಹಾಸಿಕ ಗೌರಿ ನಾಡ ಹಬ್ಬ ಒಕ್ಕೂಟದ’ ಅಧ್ಯಕ್ಷ ಬಿ.ಜಿ. ಸಾಯಿನಾಥ್ ನಾಯಕ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ 21 ಗೌರಿ ಗಣೇಶ ಉತ್ಸವ ಸಮಿತಿಗಳ ಜೊತೆಯಲ್ಲಿ ಒಕ್ಕೂಟದ ವತಿಯಿಂದ ಸಮಾಲೋಚನೆ ನಡೆಸಲಾಗಿದೆ. ಪಟ್ಟಣದ ಎಲ್ಲ ಸಮಿತಿಗಳು ಹಾಗೂ ವೀರಾಜಪೇಟೆಯ ಸುತ್ತಮುತ್ತಲ ಗೌರಿ ಗಣೇಶ ಉತ್ಸವ ಸಮಿತಿಗಳು ಗೌರಿ ಗಣೇಶ ಉತ್ಸವವನ್ನು ಸರಳ ರೀತಿಯಲ್ಲಿ ಆಚರಣೆಗೆ ಒಪ್ಪಿಗೆ ಸೂಚಿಸಿದ್ದಾರೆ. ಎಲ್ಲ ಸಮಿತಿಗಳು ಉತ್ಸವದ ನಂತರದ ಮೂರು ದಿನಗಳಲ್ಲಿ ಗೌರಿ ಗಣೇಶನ ವಿಸರ್ಜನೆಗೆ ನಿರ್ಧರಿಸಿದ್ದವು.
ಆದರೆ, ಪೂರ್ವ ಪರಂಪರೆ ಸಂಸ್ಕøತಿ, ಸಂಪ್ರದಾಯ ಪದ್ಧತಿಯನ್ನು ಹೊಂದಿರುವ ಜೈನರ ಬೀದಿಯ ಬಸವೇಶ್ವರ ದೇವಾಲಯದ ಗೌರಿಗಣೇಶೋತ್ಸವ ಸಮಿತಿ ಹಾಗೂ ಗಡಿಯಾರ ಕಂಬದ ಬಳಿಯಿರುವ ಗಣಪತಿ ದೇವಾಲಯಗಳಲ್ಲಿ ಪರಂಪರೆ ಪದ್ಧತಿಯ ನಿಯಮ ಪಾಲನೆಗೆ ಧಕ್ಕೆ ಬಾರದ ರೀತಿಯಲ್ಲಿ ಗೌರಿ ಗಣೇಶನನ್ನು ಪ್ರತಿಷ್ಠಾಪಿಸಿ ನಂತರ ಅನಂತ ಪದ್ಮನಾಭ ದಿನದಂದು ವಿಸರ್ಜಿಸುವ ತೀರ್ಮಾನಕ್ಕೆ ಒಕ್ಕೂಟ ಬದ್ದವಾಗಿದೆ ಎಂದು ಹೇಳಿದರು.
ಕಾನೂನು ಸಲಹೆಗಾರ ಟಿ.ಪಿ. ಕೃಷ್ಣ ಮಾತನಾಡಿ, ಉತ್ಸವವನ್ನು ಸರಳ ವಾಗಿ ಆಚರಿಸಿ ಉಳಿದ ಮೊತ್ತವನ್ನು ಪಟ್ಟಣ ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪ ದಿಂದ ಹಾನಿಗೊಳಗಾದ ಸಂತ್ರಸ್ತರಿಗೆ ನೀಡಲಾಗುವದು ಎಂದು ಹೇಳಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಮಾಳೇಟಿರ ಸನ್ನಿ ಕಾರ್ಯಪ್ಪ, ಖಜಾಂಜಿ ಬಿ.ಎಸ್. ಪ್ರದೀಪ್ ರೈ, ಸಲಹೆಗಾರ ಕೆ.ಬಿ. ಹರ್ಷವರ್ಧನ್, ಸದಸ್ಯರಾದ ಸುಮೇಶ್, ಕಿಶೋರ್, ಮನೋಹರ್ ಉಪಸ್ಥಿತರಿದ್ದರು.