*ಗೋಣಿಕೊಪಲ್ಪು, ಆ. 27: ಅತಿವೃಷ್ಟಿಯಿಂದ ಉಂಟಾದ ಹಾನಿಯನ್ನು ಪರಿಗಣಿಸಿ ಮುಂಜಾಗೃತಾ ಕ್ರಮವಾಗಿ ಪಟ್ಟಣದ ಕೀರೆಹೊಳೆ ಒತ್ತುವರಿಯನ್ನು ತೆರವುಗೊಳಿಸುವಂತೆ ಗೋಣಿಕೊಪ್ಪ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಗ್ರಾ.ಪಂ. ಅದ್ಯಕ್ಷೆ ಸೆಲ್ವಿ ಅಧ್ಯಕ್ಷತೆ ಯಲ್ಲಿ ಹಳೆ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಒತ್ತಾಯದ ಮೇರೆ ಈ ತೀರ್ಮಾನ ಕೈಗೊಳ್ಳಲಾಯಿತು.
ಗ್ರಾಮದಲ್ಲಿ ಕಾಡುತ್ತಿರುವ ವಿದ್ಯುತ್ ಸಮಸ್ಯೆ ಚರಂಡಿ ವ್ಯವಸ್ಥೆ, ಕಸದ ಸಮಸ್ಯೆಯನ್ನು ಬಗೆಹರಿಸಲು ಗ್ರಾಮಸ್ಥರು ಒತ್ತಾಯಿಸಿದರು. ಪೌರ ಕಾರ್ಮಿಕರಿಗೆ ಶಾಶ್ವತ ಸೂರು ಕಲ್ಪಿಸಿಕೊಡಲು ಪಂಚಾಯಿತಿ ವಿಶೇಷ ಗಮನ ಹರಿಸಬೇಕು ಎಂದು ಸಭೆಯಲ್ಲಿ ಗಮನ ಸೆಳೆಯಲಾಯಿತು.
ಗ್ರಾ.ಪಂ. ಒಳಪಡುವ ಅಂಗಡಿ ಮಳಿಗೆಗಳಿಗೆ ಟೆಂÀಡರ್ ಕರೆದು ಸಾಮಾನ್ಯರಿಗೂ ಅವಕಾಶ ದೊರಕುವಂತೆ ಮಾಡಬೇಕು. ಒಬ್ಬರ ಬಳಿ 4 ರಿಂದ 5 ಮಳಿಗೆಗಳಿದ್ದು ಬೇರೆಯವರಿಗೆ ಬಾಡಿಗೆ ನೀಡುತ್ತಿದ್ದಾರೆ ಪಂಚಾಯಿತಿಗೆ ಅಲ್ಪ ಮೊತ್ತದ ಹಣ ನೀಡಿ ಬಾಡಿಗೆ ರೂಪದಲ್ಲಿ ಲಾಭ ಪಡೆಯುತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಪಟ್ಟಣದಲ್ಲಿನ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮತ್ತು ಪಟ್ಟಣದಲ್ಲಿ ಹೆಚ್ಚಾಗುತ್ತಿರುವ ಮಾದಕ ವ್ಯಸನಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮತ್ತು ಬೈಪಾಸ್ ರಸ್ತೆಯಲ್ಲಿ ಇರುವ ಮದ್ಯದ ಅಂಗಡಿಗಳಿಂದ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಆಗುವ ತೊಂದರೆಯನ್ನು ಪೋಲಿಸ್ ಇಲಾಖೆ ಬಗೆಹರಿಸಬೇಕು ಎಂದು ಸಭೆಯಲ್ಲಿ ಸೂಚಿಸಲಾಯಿತು.
ಸ್ಥಳೀಯ ಆರೋಗ್ಯಕೆಂದ್ರದಲ್ಲಿ ಶುಚಿತ್ವದ ಕೊರತೆ ಕಾಡುತ್ತಿದೆ. ಇದನ್ನು ಬಗೆಹರಿಸಲು ಪಂಚಾಯಿತ್ ಆರೋಗ್ಯಾಧಿಕಾರಿಗಳಿಗೆ ಸೂಚಿಸುವಂತೆ ತಿಳಿಸಿದರು. ತಾ.ಪಂ. ಮಾಜಿ ಅದ್ಯಕ್ಷೆ ರಾಣಿನಾರಾಯಣ, ಗ್ರಾಮಸ್ಥರಾದ ಕಾದೀರಾ ಪೊನ್ನಪ್ಪ, ನಾರಾಯಣ ಸ್ವಾಮಿನಾಯ್ಡು, ಪರಶುರಾಮ್ ಶಿವಾಜಿ ಕುಮಾರ ಸೇರಿದಂತೆ ಹಲವರು ತಮ್ಮ ಬಡಾವಣೆಯ ಸಮಸ್ಯೆಗಳ ಬಗ್ಗೆ ಸಭೆಗೆ ತಿಳಿಸಿದರು. ಈ ಸಂದರ್ಭ ಪಂಚಾಯಿತಿ ನೋಡಲ್ ಅಧಿಕಾರಿ ಮಹದೇವ್ ಪ್ರಸಾದ್, ಅಭಿವದ್ಧಿ ಅಧಿಕಾರಿ ಚಂದ್ರಮೌಳಿ, ಹಾಗೂ ಗ್ರಾ,ಪಂ. ಸದಸ್ಯರುಗಳು, ಅಧಿಕಾರಿಗಳು ಹಾಜರಿದ್ದರು.