ಮಡಿಕೇರಿ, ಆ. 25: ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಮಳೆಯಿಂದ ಅಪಾಯದಲ್ಲಿ ಸಿಲುಕಿರುವ ನಿರಾಶ್ರಿತರೊಂದಿಗೆ, ಪರಿಹಾರ ಕೇಂದ್ರಗಳ ಅಧಿಕಾರಿಗಳು ಅಸಡ್ಡೆಯಿಂದ ವರ್ತಿಸುತ್ತಿದ್ದಾರೆ ಎಂದು ನೊಂದ ನಿರಾಶ್ರಿತರು ‘ಶಕ್ತಿ’ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ. ಮೊನ್ನೆ ಈ ಬಗ್ಗೆ ಸುಳಿವು ಪಡೆದಿರುವ ಶಾಸಕ ಕೆ.ಜಿ. ಬೋಪಯ್ಯ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಖುದ್ದಾಗಿ ನೊಂದವರ ದೂರು ಆಲಿಸಿ ಸೂಕ್ತ ವ್ಯವಸ್ಥೆ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆದಿದ್ದಾರೆ.ಅಲ್ಲದೆ ಸ್ವತಃ ಪುತ್ತೂರು ಉಪ ವಿಭಾಗಾಧಿಕಾರಿ ಕೃಷ್ಣಮೂರ್ತಿ ಹಾಗೂ ಸುಳ್ಯ ಪೊಲೀಸ್ ಠಾಣಾಧಿಕಾರಿ ಮಾಧವ ಸಹಿತ ಇತರರಿಗೆ ಮೌಖಿಕ ಸೂಚನೆಯೊಂದಿಗೆ, ಕೊಡಗು ಜಿಲ್ಲೆಯ ಗಡಿ ಗ್ರಾಮಗಳ ನಿರಾಶ್ರಿತರಿಗೆ ಅಗತ್ಯ ಸೌಲಭ್ಯ ದೊರಕಿಸಿಕೊಡುವಂತೆಯೂ, ಕಿರುಕುಳ ನೀಡದಂತೆಯೂ ತಾಕೀತು ಮಾಡಿದರು.ತಹಶೀಲ್ದಾರ್ ಭೇಟಿ: ಆ ಬಳಿಕ ನಿನ್ನೆ ಜಿಲ್ಲೆಯಿಂದ ತಹಶೀಲ್ದಾರ್ ಭೇಟಿ ನೀಡಿದ್ದು, ಸಂಪಾಜೆ ಹಾಗೂ ಕಲ್ಲುಗುಂಡಿ ಪರಿಹಾರ ಕೇಂದ್ರಗಳ ನಿರಾಶ್ರಿತರು ತಮ್ಮ ತಮ್ಮ ಮನೆಗಳಿಗೆ ಹಿಂತೆರಳಬೇಕೆಂದು ಮೌಖಿಕವಾಗಿ ಸೂಚಿಸಿದರೆನ್ನಲಾಗಿದೆ. ತೀರಾ ಅಪಾಯದ ನಡುವೆ ಮನೆ ಕಳೆದುಕೊಂಡು ಎಲ್ಲಿಗೆ ಹೋಗುವದು ಎಂದು ನಿರಾಶ್ರಿತರು ಪ್ರಶ್ನಿಸಿದಾಗ, ತಕ್ಷಣಕ್ಕೆ ಎಲ್ಲಿಗಾದರೂ ಹೋಗಿ ಮುಂದೆ ನೋಡೋಣ ಎಂದರಂತೆ.

ಮನೆ ಕಳೆದುಕೊಂಡಿರುವ ಜೋಡುಪಾಲದ ಸತ್ಯನಾರಾಯಣ ಅವರು, ಈ ಬಗ್ಗೆ ಸಮಜಾಯಿಷಿಕೆ ಬಯಸಿದಾಗ, ‘ನಾನು ತಹಶೀಲ್ದಾರ್, ಕೊಡಗಿನವಳು, ಯಾರ್ಯಾರು ಏನು ಎಂದು ಗೊತ್ತಿದೆ’ ನೀವೇನು ಹೇಳಬೇಕಿಲ್ಲ... ಎಂಬಿತ್ಯಾದಿಯಾಗಿ ಅಸಡ್ಡೆಯಿಂದ ನುಡಿದರಂತೆ. ಬಳಿಕ ಕೇವಲ ಅರ್ಧಗಂಟೆಯಲ್ಲಿ ಅಲ್ಲಿಂದ ನಿರ್ಗಮಿಸಿದರಂತೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಸಂತ್ರಸ್ತರು, ತಮ್ಮನ್ನು ದಕ್ಷಿಣ ಕನ್ನಡ ಜಿಲ್ಲೆಯ ಅಧಿಕಾರಿಗಳು ಅಸಡ್ಡೆಯಿಂದಲೇ ಕಾಣುತ್ತಿದ್ದು, ತಹಶೀಲ್ದಾರ್ ಹಾಗೂ ಗ್ರಾ.ಪಂ. ಅಧಿಕಾರಿ, ಕಂದಾಯ ಸಿಬ್ಬಂದಿ ಸಹಿತ ಕೊಡಗಿನ ಮಂದಿ ಕೂಡ ನಿರ್ಲಕ್ಷಿಸಿದರೆ ಮುಂದೇನುಗತಿ ಎಂದು ಪ್ರಶ್ನಿಸಿದ್ದಾರೆ.

ತೆಕ್ಕಿಲ ಸಮುದಾಯ ಭವನದಲ್ಲಿ ಕೆಲವೇ ಮಂದಿಗೆ ಒಂದಿಷ್ಟು ಹಣದ ರೂಪದಲ್ಲಿ ಪರಿಹಾರ ನೀಡಿರುವ ಅಧಿಕಾರಿಗಳು, ಉಳಿದ ಕೇಂದ್ರಗಳ ನಿರಾಶ್ರಿತರಿಗೆ ಯಾವದೇ ನೆರವು ಕಲ್ಪಿಸಿಲ್ಲವೆಂದು ಬಹಿರಂಗಗೊಳಿಸಿದ್ದಾರೆ. ಜೋಡುಪಾಲ, ಮೊಣ್ಣಂಗೇರಿ, ಮದೆ ವ್ಯಾಪ್ತಿಯ ಸಂತ್ರಸ್ತರಿಗೆ ಜಿಲ್ಲಾಡಳಿತ ಖುದ್ದು ಗಮನಿಸಿ ಸೂಕ್ತ ನೆರವು ಕಲ್ಪಿಸಿಕೊಡುವಂತೆ ಅಳಲು ತೋಡಿಕೊಂಡಿದ್ದಾರೆ.

ಕಾಂಡನಕೊಲ್ಲಿಯಲ್ಲಿ: ಮಡಿಕೇರಿ-ಮಾದಾಪುರ ನಡುವೆ ಹೆದ್ದಾರಿ ಸಂಪರ್ಕ ಕಡಿತಗೊಂಡು ತೊಂದರೆಗೆ ಸಿಲುಕಿರುವ ಕಾಂಡನಕೊಲ್ಲಿ ನಿವಾಸಿಗಳು, ಮಕ್ಕಂದೂರು ಗ್ರಾ.ಪಂ.ನಲ್ಲಿ ದಾಸ್ತಾನು ಇರಿಸಿರುವ ಆಹಾರ ಧಾನ್ಯಗಳನ್ನು ಪಡೆಯಲು ಬಂದಾಗ ಏನೂ ಕೊಡದೆ ಹಿಂದಕ್ಕೆ ಕಳುಹಿಸಿದ್ದಾಗಿ ಅಲ್ಲಿನ ಅಬಲೆ ಸೀತಮ್ಮ ಎಂಬವರು ‘ಶಕ್ತಿ’ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.