ಮಡಿಕೇರಿ, ಆ. 25: ಜಲ ಪ್ರಳಯಕ್ಕೆ ತುತ್ತಾಗಿ ನಿರಾಶ್ರಿತರಾಗಿರುವ ಮಂದಿಯ ಸಂಪೂರ್ಣ ಸೇವೆಗೆ ಸ್ವಯಂಪ್ರೇರಿತ ಸೇವಕರು ಹಗಲಿರುಳೂ ಶ್ರಮಿಸಿದ್ದಾರೆ. ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಶ್ರಯ ಪಡೆದಿರುವ ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿರುವ ನೂರಾರು ಮಂದಿಯ ಸೇವೆಗಾಗಿ ಬೆಂಗಳೂರಿನ ವೈದ್ಯರು ಹಾಗೂ ಸ್ವಯಂ ಸೇವಕರನ್ನೊಳಗೊಂಡ ತಂಡ ಕಳೆದ ಒಂದು ವಾರದಿಂದ ಶ್ರಮಿಸುತ್ತಿದೆ.

ತಾಲೂಕಿನ ಹರಗ, ಕುಮಾರಳ್ಳಿ, ಬಾಚಳ್ಳಿ, ಕೂತಿ, ಮಕ್ಕಂದೂರು, ಮಕ್ಕಳಗುಡಿಬೆಟ್ಟ ಸುತ್ತಮುತ್ತಲಿನ ನಾನೂರಕ್ಕೂ ಅಧಿಕ ಸಂತ್ರಸ್ತರು ಭಯಭೀತರಾಗಿ ತಮ್ಮ ಆಸ್ತಿ, ಮನೆಗಳನ್ನು ತೊರೆದು ಕಳೆದ ಒಂದು ವಾರದಿಂದ ಒಕ್ಕಲಿಗರ ಸಮುದಾಯ ಭವನದಲ್ಲಿ ಆಶ್ರಯ ಪಡೆದಿದ್ದಾರೆ. ಇವರುಗಳ ಸೇವೆಗಾಗಿ ಹಲವಾರು ಸಂಘಸಂಸ್ಥೆಗಳು ಹಗಲಿರುಳು ದುಡಿಯುತ್ತಿವೆ.

ವಿಶೇಷವಾಗಿ ಬೆಂಗಳೂರಿನ ವೈದ್ಯರುಗಳಾದ ಡಾ.ಶ್ಯಾಮ್, ಡಾ.ರೋಹನ್, ಐಟಿ ಸಂಸ್ಥೆ ಯೊಂದರಲ್ಲಿ ಉನ್ನತ ಹುದ್ದೆಯಲ್ಲಿ ರುವ ಡಾ.ಕೇಶವ್ ಮತ್ತು ಸ್ನಾತಕೋತ್ತರ ಪದವೀಧರರಾದ ಗಣೇಶ್ ಅವರುಗಳು ಸಂತ್ರಸ್ತರ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಮಾನವೀಯತೆ ಯನ್ನು ಮೆರೆದಿದ್ದಾರೆ.

ಅಲ್ಲದೇ ಗದಗ್‍ನಿಂದ ಆಗಮಿಸಿದ್ದ ತಜ್ಞ ವೈದ್ಯರನ್ನೊಳ ಗೊಂಡ ತಂಡವೂ ಕೂಡ ಕಳೆದ ಮೂರು ದಿನಗಳಿಂದ ಸಂತ್ರಸ್ತರ ಸೇವೆಯಲ್ಲಿ ತೊಡಿಗಿಸಿಕೊಂಡಿದೆ. ಇವರೊಂದಿಗೆ ಗೌಡ ಯುವ ವೇದಿಕೆ ಕಾರ್ಯಕರ್ತರು, ಸೇವಾ ಭಾರತಿ ಸಂಸ್ಥೆಯ ಸದಸ್ಯರು, ಸಂಘ ಪರಿವಾರದ ಕಾರ್ಯಕರ್ತರು ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಸದಸ್ಯರು ಸ್ವಯಂಪ್ರೇರಿತರಾಗಿ ದಿನದ 24 ಗಂಟೆಗಳ ಕಾಲವೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಮುದಾಯ ಭವನದಲ್ಲಿ ಈಗಾಗಲೇ 456 ಸಂತ್ರಸ್ಥರು ನೋಂದಣಿ ಮಾಡಿಸಿಕೊಂಡಿದ್ದು, ಮಳೆಯ ತೀವ್ರತೆ ಕಡಿಮೆಯಾಗಿರುವ ಹಿನ್ನಲೆಯಲ್ಲಿ 300ಕ್ಕೂ ಅಧಿಕ ಮಂದಿ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ. ಉಳಿದವರು ಸಂತ್ರಸ್ಥರ ಪರಿಹಾರ ಕೇಂದ್ರದಲ್ಲಿ ವಾಸ್ತವ್ಯ ಹೂಡಿದ್ದಾರೆ. ಕೇಂದ್ರದಲ್ಲಿ ತಜ್ಞ ವೈದ್ಯರುಗಳಿಂದ ತಪಾಸಣೆ, ಉತ್ತಮ ವೈದ್ಯಕೀಯ ತಂಡ ಸೇವೆ ಸಲ್ಲಿಸು ತ್ತಿದ್ದು, ಪೊಲೀಸ್ ಇಲಾಖೆಯೂ ಕೂಡ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಊಟ ಮತ್ತು ವಸತಿ ವ್ಯವಸ್ಥೆಯನ್ನು ವಿವಿಧ ಸಂಘಸಂಸ್ಥೆಗಳ ಕಾರ್ಯಕರ್ತರು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರಾಗಿದ್ದಾರೆ.

ಬೃಹತ್ ಸಭಾಂಗಣವನ್ನು ಶುಚಿಗೊಳಿಸುವದು, ಅಡುಗೆ ತಯಾರಿ, ಊಟ ಬಡಿಸುವದು, ಶೌಚಾಲಯ ಶುಚಿತ್ವ, ಕೇಂದ್ರಕ್ಕೆ ಆಗಮಿಸುವ ವಸ್ತುಗಳ ಮಾಹಿತಿ, ಪ್ರತಿಯೋರ್ವರ ಆರೋಗ್ಯ ಕಾಳಜಿ ಇತ್ಯಾದಿ ಸೇವೆಗಳಲ್ಲಿ ಸ್ವಯಂ ಪ್ರೇರಿತವಾಗಿ ಸ್ವಯಂಸೇವಕರು ತೊಡಗಿಸಿಕೊಂಡಿದ್ದಾರೆ. ಕಳೆದ ಒಂದು ವಾರದಿಂದ ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ ಸಂತ್ರಸ್ಥರಿಗೆ ಎಲ್ಲರ ಸಹಕಾರದಿಂದ ಉತ್ತಮ ಸೇವೆ ಸಲ್ಲಿಸುತ್ತಿದ್ದೇವೆ. ಬಹುತೇಕ ಸಂತ್ರಸ್ಥರು ತಮ್ಮ ತಮ್ಮ ಮನೆಗಳತ್ತ ತೆರಳುತ್ತಿದ್ದಾರೆ. ಉಳಿದವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವದು. ನೂರಾರು ಕಾರ್ಯಕರ್ತರ ಶ್ರಮದಿಂದಾಗಿ ಸಂತ್ರಸ್ಥರಿಗೆ ಸೇವೆ ಸಲ್ಲಿಸಲಾಗಿದೆ ಎಂದು ಗೌಡ ಯುವ ವೇದಿಕೆ ಅಧ್ಯಕ್ಷ ಬಿ.ಜೆ. ದೀಪಕ್ ಅಭಿಪ್ರಾಯಿಸಿದ್ದಾರೆ.