ಮಡಿಕೇರಿ, ಆ. 25: ತೀವ್ರ ಅತಿವೃಷ್ಟಿಗೆ ತುತ್ತಾಗಿ ಸಂತ್ರಸ್ತರಾಗಿರುವ ಕುಟುಂಬಗಳಿಗೆ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಂದ ಆಹಾರ ಮತ್ತು ಇತರ ಸಾಮಗ್ರಿಗಳು ಹರಿದು ಬರುತ್ತಿದ್ದು, ಈ ಆಹಾರ ಸಾಮಗ್ರಿಗಳನ್ನು ವ್ಯವಸ್ಥಿತವಾಗಿ ಪೂರೈಸಲು ಇನ್ನಷ್ಟು ಪ್ರಯತ್ನ ಮಾಡಬೇಕಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ವೀರಪ್ಪ ವೀರಭದ್ರಪ್ಪ ಮಲ್ಲಾಪುರ ಅವರು ಸಲಹೆ ಮಾಡಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ನಿರಾಶ್ರಿತರಾಗಿ ಹೆಚ್ಚು ಆಹಾರ ಮತ್ತು ಇತರೆ ಸಾಮಗ್ರಿಗಳು ಪೂರೈಕೆಯಾಗುತ್ತಿದ್ದು, ಈ ಆಹಾರವನ್ನು ಸಮರ್ಪಕವಾಗಿ ದಾಸ್ತಾನು ಮಾಡಿಕೊಂಡು, ವಿತರಣೆ ಮಾಡಬೇಕು. ಇದಕ್ಕಾಗಿ ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಬೇಕು ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನಿಸಾ ಅವರು ಮಾತನಾಡಿ ಪ್ರಾಧಿಕಾರದ ವತಿಯಿಂದ ಎಲ್ಲಾ ಕಡೆಗಳಲ್ಲಿ ಅರೆಕಾಲಿಕ ಸ್ವಯಂ ಸೇವಕ ಸದಸ್ಯರು ಕಾರ್ಯ ನಿರ್ವಹಿಸುತ್ತಿದ್ದು, ಅವರ ಸಹಾಯವನ್ನು ಪಡೆಯಬಹುದಾಗಿದೆ. ಸಾರ್ವಜನಿಕರು ಹಾಗೂ ಭೂ ಮಾಲೀಕರು ತಮ್ಮಲ್ಲಿರುವ ಹೆಚ್ಚುವರಿ ಭೂಮಿ ಇದ್ದರೆ ಅವರು ಮುಂದೆ ಬಂದು ಸಂತ್ರಸ್ತರಿಗೆ ತಾತ್ಕಾಲಿಕ ಶೇಡ್ಗಳನ್ನು ನಿರ್ಮಿಸಿ ಕೊಡಲು ಸರ್ಕಾರದ ಜೊತೆ ಕೈಜೊಡಿಸಬೇಕು ಎಂದು ಮನವಿ ಮಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಅವರು ಸಮಾರು 50 ಸಾವಿರ ಕುಟುಂಬಗಳಿಗೆ 10 ಕೆ.ಜಿ ಅಕ್ಕಿ, 1 ಕೆ.ಜಿ ಸಕ್ಕರೆ, 1 ಲೀಟರ್ ಅಡುಗೆ ಎಣ್ಣೆಯನ್ನು ಜಿಲ್ಲಾಡಳಿತದಿಂದ ವಿತರಿಸಲಾಗುತ್ತಿದ್ದು, ಪ್ರತಿಯೊಂದು ಹಳ್ಳಿಗಳಿಗೂ ಪರಿಹಾರಗಳನ್ನು ಗ್ರಾಮ ಪಂಚಾಯಿತಿ ಮುಖಾಂತರ ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಮನು ಸೋಮಯ್ಯ ಅವರು ಮಾತನಾಡಿ, ರಾಜ್ಯದ ವಿವಿಧ ಕಡೆಗಳಿಂದ ಪರಿಹಾರ ಸಾಮಗ್ರಿಗಳು ಬರುತ್ತಿದ್ದು, ಹಲವು ಗ್ರಾ.ಪಂ.ಗಳಲ್ಲಿ ನಿಜವಾದ ಸಂತ್ರಸ್ತರಿಗೆ ಪರಿಹಾರದ ವಸ್ತುಗಳು ತಲಪುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡಾ.ಶಿವಕುಮಾರ ಅವರು ಮಾತನಾಡಿ ಕಾಟಗೇರಿ ಶಾಲೆಯಲ್ಲಿ ಸುಮಾರು 473 ಸಂತ್ರಸ್ತರಿದ್ದು, ಅಲ್ಲಿಯ ಸಂಘಟನೆ ದಾನಿಗಳು ನೀಡಿದ ಪರಿಹಾರ ಸಾಮಗ್ರಿಗಳನ್ನು ಒಂದು ಸ್ಥಳದಲ್ಲಿ ಸಂಗ್ರಹಿಸಿಕೊಂಡು ಸಂತ್ರಸ್ತರಿಗೆ ನೀಡದೇ ಹಾಗೆ ಇಡಲಾಗಿದೆ ಎಂದು ತಿಳಿಸಿದರು.
ಸಾಯಿ ಶಂಕರ ವಿದ್ಯಾಸಂಸ್ಥೆಯ ಪೊನ್ನಂಪೇಟೆ ವತಿಯಿಂದ ಸುಮಾರು 100 ಮಕ್ಕಳಿಗೆ 3 ವರ್ಷಗಳವರೆಗೆ ಉಚಿತ ಶಿಕ್ಷಣವನ್ನು ನೀಡಲು ನಿರ್ಧರಿಸಲಾಗಿದೆ ಎಂದು ಸಂಸ್ಥೆಯ ಸದಸ್ಯರು ಮಾಹಿತಿ ನೀಡಿದರು.
ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ಪವನೇಶ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜಶೇಖರ್, ವಕೀಲರ ಸಂಘದ ಅಧ್ಯಕ್ಷರಾದ ಕೆ.ಎಸ್.ಕವನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕರಾದ ಮಲ್ಲೇಸ್ವಾಮಿ, ಸಂಘ ಸಂಸ್ಥೆಯ ಸದಸ್ಯರು ಹಲವು ಸಲಹೆ ನೀಡಿದರು.