ಸೋಮವಾರಪೇಟೆ,ಆ.26: ಭಾರೀ ಮಳೆಯಿಂದ ಗ್ರಾಮೀಣ ಪ್ರದೇಶಗಳು ತೀರಾ ಹದಗೆಟ್ಟಿದ್ದು, ಜನಜೀವನ ಅಸ್ತವ್ಯಸ್ಥವಾಗಿರುವದನ್ನು ಮನಗಂಡು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಇಲ್ಲಿನ ಒಕ್ಕಲಿಗರ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯಲ್ಲಿ ಹಾಸ್ಟೆಲ್ ವ್ಯವಸ್ಥೆ ಮಾಡಲಾಗಿದೆ.

ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ತೆರೆಯಲಾಗಿರುವ ಹಾಸ್ಟೆಲ್‍ನ್ನು ಆದಿಚುಂಚನಗಿರಿ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮಳೆ,ಪ್ರವಾಹದಿಂದ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಪ್ರಮಾಣದ ಹಾನಿಗಳು ಸಂಭವಿಸಿದ್ದು, ಮನೆ ಮಠ ಕಳೆದುಕೊಳ್ಳುವಂತಾಗಿದೆ. ಹಲವೆಡೆ ರಸ್ತೆಗಳೂ ಇಲ್ಲದಿರುವದರಿಂದ ಸಂಚಾರ ಸ್ಥಗಿತಗೊಂಡಿದೆ. ಇದರಿಂದಾಗಿ ಶಾಲಾ ಕಾಲೇಜಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ತೊಂದರೆ ಎದುರಾಗಿದ್ದನ್ನು ಮನಗಂಡು ವಸತಿ ನಿಲಯ ಸ್ಥಾಪಿಸಲಾಗಿದ್ದು, ಅರ್ಹ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭ ಹಾಸನ ಶಾಖಾ ಮಠಾಧೀಶರಾದ ಶ್ರೀ ಶಂಭುನಾಥಸ್ವಾಮೀಜಿ, ರಾಮನಗರದ ಅನ್ನದಾನೇಶ್ವರ ಸ್ವಾಮೀಜಿ, ಮಾಜೀ ಸಚಿವ ಬಿ.ಎ. ಜೀವಿಜಯ, ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ, ಕಾರ್ಯದರ್ಶಿ ಗಣಪತಿ, ಕಾಲೇಜು ಪ್ರಾಂಶುಪಾಲ ಶರಣ್, ಜಿ.ಪಂ. ಸದಸ್ಯರಾದ ಬಿ.ಜೆ. ದೀಪಕ್, ಪೂರ್ಣಿಮಾ ಗೋಪಾಲ್, ಪ್ರಮುಖರಾದ ಕೆ.ಎಂ. ಲೋಕೇಶ್, ಭರತ್‍ಕುಮಾರ್, ಸುರೇಶ್ ಹೆಚ್.ಆರ್., ಮಿಥುನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.