ಮಡಿಕೇರಿ, ಆ. 25: ಕೊಡಗು ಜಿಲ್ಲೆಯಾದ್ಯಂತ ಮಳೆಯಿಂದ ಮನೆಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದ ಸಂತ್ರಸ್ತರಿಗೆ ಇಂದು ಆಹಾರ ಸಚಿವ ಜಮೀರ್ ಅಹಮ್ಮದ್ ಖಾನ್ ಆಹಾರ ಕಿಟ್ ವಿತರಣೆ ಮಾಡಿದರು. ಮಡಿಕೇರಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಬಳಿ ಇರುವ ಆಹಾರ ನಾಗರಿಕ ಸರಬರಾಜು ಘಟಕದಲ್ಲಿ ಜಮೀರ್ ಅವರು ಸಂತ್ರಸ್ತರಿಗೆ ಆಹಾರದ ಕಿಟ್ ವಿತರಣೆ ಮಾಡಿದರು. ನಂತರ ಮಾತನಾಡಿದ ಸಚಿವರು ಅನ್ನ ಭಾಗ್ಯ ಯೋಜನೆಯಡಿಯಲ್ಲಿ 50 ಸಾವಿರ ಕಿಟ್ಗಳನ್ನು ಮಾಡಲಾಗಿದ್ದು, ಗ್ರಾಮ ಪಂಚಾಯತಿಗಳ ಮೂಲಕ ವಿತರಣೆ ಮಾಡಲಾಗುತ್ತದೆ. ಅಗತ್ಯವಿದ್ದಲ್ಲಿ ಇನ್ನು ಹೆಚ್ಚಿನ ಆಹಾರ ಕಿಟ್ಗಳನ್ನು ತರಿಸಲಾಗುವದೆಂದು ಹೇಳಿದರು. ನಾವು ನೀಡಿರುವ ಕಿಟ್ನಲ್ಲಿ 10 ಕೆ.ಜಿ ಅಕ್ಕಿ, 5 ಲೀಟರ್ ಸೀಮೆಎಣ್ಣೆ, ಒಂದು ಲೀ ಪಾಮ್ ಎಣ್ಣೆ ಸೇರಿದಂತೆ ಒಂದು ಕೆ.ಜಿ ಉಪ್ಪು ಇರಲಿದೆ ಎಂದು ತಿಳಿಸಿದರು. ಮುಖ್ಯ ಮಂತ್ರಿಗಳು ಈಗಾಗಲೇ ಮನೆ ಕಳೆದುಕೊಂಡವರಿಗೆ (ಮೊದಲ ಪುಟದಿಂದ) ಮನೆ ನಿರ್ಮಾಣ ಮಾಡಿಕೊಡಲು ತೀರ್ಮಾನ ಮಾಡಿದ್ದು, ಸರ್ವೆಯಾದ ಬಳಿಕ ನಿರ್ಗತಿಕರಿಗೆ ವಸತಿ ಕಲ್ಪಿಸಲಾಗುವದು. ತಾನು ವೈಯಕ್ತಿವಾಗಿ ಐದು ಸಾವಿರ ಕಂಬಳಿಗಳನ್ನು, ಐದು ಸಾವಿರ ಬಕೆಟ್, 2400 ಮಗ್ಗಳನ್ನು, ಮೂರು ಸಾವಿರ ಮಹಿಳೆಯರ ನೈಟಿಗಳನ್ನು ಸಂತ್ರಸ್ತರಿಗೆ ಪರಿಹಾರ ಕೇಂದ್ರದಲ್ಲಿ ನೀಡಲಿದ್ದೇನೆÉ ಎಂದರು.
ಮಳೆ ಅನಾಹುತದಿಂದ ಪಡಿತರ ಚೀಟಿ ಕಳೆದುಕೊಂಡವರಿಗೆ ಇಲಾಖೆಯಿಂದ ಹೊಸ ಪಡಿತರ ಚೀಟಿ ವಿತರಣೆಗೆ ಕ್ರಮ ಕೈಗೊಳ್ಳಲಾಗುವದೆಂದು ಆಹಾರ ಸಚಿವರು ಹೇಳಿದರು.
ಈ ಸಂದರ್ಭ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಶ್ರೀವಿದ್ಯಾ, ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಸದಸ್ಯರಾದ ಪೀಟರ್, ಜುಲೇಕಾಬಿ ಇತರರಿದ್ದರು.
ಪತ್ರಿಕಾ ಗೋಷ್ಠಿ: ವ್ಯಾಲಿವ್ಯೂನಲ್ಲಿ ಸುದ್ದಿಗೋಷ್ಠಿ ನಡೆಸಿದ ಆಹಾರ ಇಲಾಖಾ ಸಚಿವ ಜಮೀರ್ ಅವರು, ಮಳೆಯಿಂದ ಮನೆ ಕಳೆದುಕೊಂಡವರಿಗೆ ಸರ್ಕಾರದಿಂದ ಮನೆ ಕಲ್ಪಿಸಿಕೊಡಲಾಗುವದು. ಇದಕ್ಕಾಗಿ 5 ಜಾಗಗಳನ್ನು ಗುರುತು ಮಾಡಲಾಗಿದೆ. ಮನೆ ನಿರ್ಮಾಣವಾಗುವವರೆಗೂ ತಾತ್ಕಾಲಿಕ ಮನೆ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುವದಾಗಿ ತಿಳಿಸಿದರು. ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿ ಬಗ್ಗೆ ಗರಂ ಆದ ಕುರಿತು ಪ್ರತಿಕ್ರಿಯಿಸಿದ ಜಮೀರ್ ನಿರ್ಮಲಾ ಸೀತಾರಾಮನ್ ಅವರಿಗೆ ಜನರ ಕಷ್ಟದ ಬಗ್ಗೆ ಅರಿವಿಲ್ಲ ಎಂದು ಕುಟುಕಿದರು. ಸಂತ್ರಸ್ತರಿಗಾಗಿ ಬರುತ್ತಿರುವ ಆಹಾರ ಸಾಮಗ್ರಿಗಳು ದುರುಪಯೋಗವಾಗದಂತೆ ಎಚ್ಚರವಹಿಸಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಎಂದ ಸಚಿವರು ರಾಜ್ಯದ ಜನತೆ ಕೊಡಗಿನ ನಿರಾಶ್ರಿತರಿಗೆ ಮನೆಕಟ್ಟಲು ಕೂಡ ನೆರವು ನೀಡುವಂತಾಗಬೇಕೆಂದು ಮನವಿ ಮಾಡಿದರು.