ವೀರಾಜಪೇಟೆ, ಆ. 26: ನಲ್ಲಿ ನೀರು ಪೊರೈಕೆಯ ಶೇಖರಣಾ ಕೇಂದ್ರಗಳಲ್ಲಿ ಯಾವ ರೀತಿ ನೀರನ್ನು ಶುದ್ಧೀಕರಿಸಬೇಕು. ಯಾವ ಪ್ರಮಾಣದಲ್ಲಿ ನೀರು ಶುದ್ಧೀಕರಣದ ರಾಸಾಯನಿಕ ಮಿಶ್ರಣವನ್ನು ಬಳಸಬೇಕು ಎಂಬುದರ ಕುರಿತು ಇಲ್ಲಿನ ಪಟ್ಟಣ ಪಂಚಾಯಿತಿಯ ಕುಡಿಯುವ ನೀರು ಪೊರೈಕೆ ಘಟಕದ ನೌಕರರಿಗೆ ಮೈಸೂರು ನಗರ ಪಾಲಿಕೆಯ ಆರೋಗ್ಯ ಅಧಿಕಾರಿಗಳು ಖುದ್ದು ಪ್ರಾತ್ಯಕ್ಷಿತೆ ನೀಡಿದರು.

ಪುರಭವನದಲ್ಲಿ ಹಮ್ಮಿಕೊಂಡಿದ್ದ ನೀರು ಶುದ್ಧೀಕರಣದ ಪ್ರಾತ್ಯಕ್ಷಿತೆಯಲ್ಲಿ ಐ.ಎ.ಎಸ್. ಅಧಿಕಾರಿ ಡಾ:ದಿಲೀಪ್ ಅವರು ಮಾತನಾಡಿ ನಿಗದಿತ ರಾಸಾಯನಿಕ ವಸ್ತುಗಳನ್ನು ನೀರು ಶುದ್ಧೀಕರಣದಲ್ಲಿ ತಜ್ಞರು ಸಲಹೆ ನೀಡುವಂತೆ ಮಿತವಾಗಿ ಬಳಸಬೇಕು. ರಾಸಾಯನಿಕ ವಸ್ತುವನ್ನು ನೀರಿಗೆ ಬಳಸುವಾಗ ನೌಕರರು ಕೈಗೆ ಗ್ಲೌಸ್ ಹಾಗೂ ಮುಖಕ್ಕೆ ಮೌಸ್‍ನ್ನು ಹಾಕಿಕೊಂಡು ಆರೋಗ್ಯವನ್ನು ರಕ್ಷಿಸಿಕೊಳ್ಳಬೇಕು. ಯಾವದೇ ಹೊಳೆ, ನದಿ ತೋಡಿನ ನೀರನ್ನು ನೇರವಾಗಿ ನಾಗರಿಕರಿಗೆ ಪೊರೈಸಬಾರದು. ಇದರಿಂದ ರೋಗ ರುಜಿನಗಳಿಗೆ ಅವಕಾಶ ನೀಡಿದಂತಾಗುತ್ತದೆ. ಶುದ್ಧೀಕರಿಸದೆ ನೀರನ್ನು ಯಾರು ಬಳಸಬಾರದು. ನೀರನ್ನು ತಜ್ಞರ ಸಲಹೆಯಂತೆ ವೈಜ್ಞಾನಿಕವಾಗಿ ಶುದ್ಧೀಕರಿಸಿದ ನಂತರ ಉಪಯೋಗಿಸಬೇಕು. ಡಾ: ಶಶಾಂಕ್ ಅವರು ನೀರು ಶುದ್ಧೀಕರಣದ ರಾಸಾಯನಿಕ ವಸ್ತುಗಳಲ್ಲಿ ಒಂದಾದ ಬ್ಲಿಚಿಂಗ್ ಪೌಡರ್‍ನ್ನು ಬಳಸುವ ವಿಧಾನವನ್ನು ಪ್ರಾಯೋಗಿಕವಾಗಿ ತೋರಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಪಟ್ಟಣ ಪಂಚಾ ಯಿತಿಯ ಮುಖ್ಯಾಧಿಕಾರಿ ಎನ್.ಪಿ. ಹೇಮ್‍ಕುಮಾರ್ ಮಾತನಾಡಿ ಪಟ್ಟಣದ ನಾಗರೀಕರಿಗೆ ಶುದ್ಧ ನೀರು ಪೊರೈಸುವದು ಪಟ್ಟಣ ಪಂಚಾಯಿತಿಯ ಹೊಣೆ, ಆದ್ಯ ಕರ್ತವ್ಯವಾಗಿದೆ. ಕಾವೇರಿ ಹೊಳೆಯಿಂದ ನೇರವಾಗಿ ಶೇಖರಣಾ ಕೇಂದ್ರಕ್ಕೆ ಸರಬರಾಜಾಗುವ ನೀರನ್ನು ಮೊದಲು ಎಲ್ಲ ರೀತಿಯಿಂದಲು ಶುದ್ಧೀಕರಿಸಿದ ನಂತರ ಪಟ್ಟಣದ ಜನತೆಗೆ ಪೊರೈಸಲಾಗುವದು. ನೀರು ಶುದ್ಧೀಕರಣದಂತೆ ಪಟ್ಟಣದಲ್ಲಿ ಶುಚಿತ್ವ ಕಾಪಾಡಲು ಆದ್ಯತೆ ನೀಡಲಾಗಿದೆ. ಸಾರ್ವಜನಿಕರು ಇದಕ್ಕೆ ಸಹಕರಿಸುವಂತೆ ವಿನಂತಿಸಿದರು.

ಪ್ರಾತ್ಯಕ್ಷಿತೆಯಲ್ಲಿ ನೀರು ಪೊರೈಕೆ ಘಟಕದ ನೌಕರರು, ಡಾ. ಶರವಣ, ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು, ಆರೋಗ್ಯಾಧಿಕಾರಿ ವೇಲ್ ಮುರುಗನ್, ರೆವಿನ್ಯೂ ಅಧಿಕಾರಿ ಸೋಮೇಶ್ ಮತ್ತಿತರರು ಹಾಜರಿದ್ದರು.