ಮಡಿಕೇರಿ, ಆ. 24: ಕೊಡಗಿನ ಅತಿವೃಷ್ಟಿ ಪ್ರವಾಹದ ದುರಂತದ ಕತೆ ಇನ್ನೂ ಮುಗಿದಿಲ್ಲ, ಕಳೆದ ವಾರದ ದುರ್ಘಟನೆಯ ಸಂದರ್ಭ ತಾಯಿಯೊಬ್ಬರು ಪ್ರವಾಹದಿಂದ ತಪ್ಪಿಸಿಕೊಂಡು ಹೊರಬರುವ ಸಂದರ್ಭ ತನ್ನ ಕೈಯಲ್ಲಿ ಪುತ್ರನನ್ನು ರಕ್ಷಿಸಲು ಹರಸಾಹಸಪಟ್ಟರೂ, ಕಣ್ಣೆದುರೇ ಬಾಲಕ ನೀರುಪಾಲಾದ ಧಾರುಣ ಘಟನೆ ನಡೆದಿದೆ. ಈ ಕುರಿತು ಡಿಜಿಪಿ ನೀಲಮಣಿ ಎನ್. ರಾಜು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.ಇಂದು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಈ ಬಗ್ಗೆ ತಿಳಿಸಿದ ಅವರು, ಘಟನೆಯ ಕುರಿತು ನಿನ್ನೆ ಸಂಜೆಯಷ್ಟೆ ಬಾಲಕನ ಪೋಷಕರು ಪೊಲೀಸ್ ಇಲಾಖೆಯ ಗಮನಕ್ಕೆ ತಂದುದಾಗಿ ತಿಳಿಸಿದರು. ಕಾಲೂರು ಗ್ರಾಮದ ಸೋಮಶೇಖರ್ ಎಂಬವರ ಪುತ್ರ ಗಗನ್ ಗಣಪತಿ (7) ಎಂಬ ಬಾಲಕನೇ ನೀರು ಪಾಲಾದ ದುರ್ದೈವಿ ಎಂದು ವಿಷಾದಿಸಿದರು. ಇದರೊಂದಿಗೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 10ಕ್ಕೆ ಏರಿದೆ. 9 ಮಂದಿ ಇದುವರೆಗೆ ನಾಪತ್ತೆಯಾಗಿರುವದು ಗಮನಕ್ಕೆ ಬಂದಿದೆ ಎಂದರು.ದುರುಪಯೋಗ ಕಂಡುಬಂದಲ್ಲಿ ಕಠಿಣ ಕ್ರಮಅತಿವೃಷ್ಟಿಯಿಂದ ಸಂತ್ರಸ್ತರಾದವರಿಗೆ ರಾಜ್ಯದ ನಾನಾ ಭಾಗಗಳಿಂದ ಆಹಾರ ಮತ್ತು ಇತರ ಸಾಮಗ್ರಿಗಳು ಹರಿದು ಬರುತ್ತಿದ್ದು, ಜಿಲ್ಲಾಡಳಿತಕ್ಕೆ ಬರುವ ಆಹಾರ ಸಾಮಗ್ರಿಗಳನ್ನು 4 ಕಡೆಗಳಲ್ಲಿ ದಾಸ್ತಾನು ಮಾಡಲಾಗುತ್ತಿದೆ. ಬಳಿಕ ಪರಿಹಾರ ಕೇಂದ್ರಗಳಿಗೆ ಹಾಗೂ ಗ್ರಾ.ಪಂ.ಮೂಲಕ ಇತರ ಸಂತ್ರಸ್ತರಿಗೆ ಆಹಾರ ಹಾಗೂ ಇತರ ಸಾಮಾಗ್ರಿ ಸಮರ್ಪಕವಾಗಿ ಪೂರೈಕೆ ಮಾಡಲಾಗುತ್ತಿದೆ. ಆದರೂ ಆಹಾರ ಸಾಮಗ್ರಿ ದುರುಪಯೋಗವಾಗುತ್ತಿದೆ ಎಂಬ ವರದಿಗಳು ಕೇಳಿಬರುತ್ತಿದ್ದು, ಇಂತಹ ದೂರುಗಳು ಕೇಳಿಬಂದಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಿದೆ ಎಂದು ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಎಚ್ಚರಿಕೆ ನೀಡಿದರು. ಜಿಲ್ಲಾಡಳಿತಕ್ಕೆ ಬರುವ ಆಹಾರ ಮತ್ತು ಇತರ ಸಾಮಗ್ರಿಗಳನ್ನು ಪರಿಹಾರ ಕೇಂದ್ರಗಳಿಗೆ ಮತ್ತು ಗ್ರಾ.ಪಂ.ಮೂಲಕ ಸಂತ್ರಸ್ತರಿಗೆ ವಿತರಣೆ ಮಾಡಲಾಗುತ್ತಿದೆ. ಆದರೂ ದುರುಪ ಯೋಗವಾಗುತ್ತಿದೆ ಎಂಬ ಮಾಹಿತಿಗಳು ಹರಿದಾಡುತ್ತಿದೆ.

(ಮೊದಲ ಪುಟದಿಂದ) ಈ ಸಂಬಂಧ ಹೆಚ್ಚಿನ ನಿಗಾ ವಹಿಸಲಾಗುವದು. ಸಾರ್ವಜನಿಕರು ಸಹ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬಹುದಾಗಿದೆ ಎಂದು ಅವರು ತಿಳಿಸಿದರು.

ಇತ್ತೀಚೆಗೆ ಪ್ರಕೃತಿ ವಿಕೋಪಕ್ಕೆ ಸಿಲುಕಿ 10 ಮಂದಿ ಮೃತಪಟ್ಟಿದ್ದು, 10 ಮಂದಿ ಕಾಣೆಯಾಗಿದ್ದಾರೆ. ಕಾಣೆಯಾದ 10 ಮಂದಿಯಲ್ಲಿ 4 ಜನರು ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು ಅವರು ಮಾಹಿತಿ ನೀಡಿದರು.

ಸಂತ್ರಸ್ತರಾಗಿರುವ 5 ಸಾವಿರ ಮಂದಿ ಪರಿಹಾರ ಕೇಂದ್ರದಲ್ಲಿದ್ದಾರೆ. ಪರಿಹಾರ ಕೇಂದ್ರದಲ್ಲಿರುವ ಸಂತ್ರಸ್ಥರಿಗೆ ದುಃಖ ಕಡಿಮೆ ಮಾಡಲು ವಿವಿಧ ಮನೋಸ್ಥೈರ್ಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ಆ ದಿಸೆಯಲ್ಲಿ ಇನ್ನಷ್ಟು ಮನೋಬಲ ಹೆಚ್ಚಿಸಲು ಮನೋವಿಜ್ಞಾನ ತಂಡವನ್ನು ಕಳುಹಿಸಿಕೊಡಲಾಗುವದು ಎಂದು ಮಾಹಿತಿ ನೀಡಿದರು.

ಸಂಪನ್ಮೂಲದ ಕೊರತೆ ಇಲ್ಲ, ಸ್ಥಳೀಯರಾದ ಕರ್ನಲ್ ಮಾದಪ್ಪ ನೇತೃತ್ವದಲ್ಲಿ ಗರುಡ ತಂಡ ಕಾರ್ಯ ನಿರ್ವಹಿಸಲಿದೆ. ರಾಜ್ಯ ಪ್ರಕೃತಿ ವಿಕೋಪ ತಂಡ ನಿರಾಶ್ರಿತರಿಗೆ ಪರಿಹಾರ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಸರ್ಕಾರದ ಜೊತೆ ಸರ್ಕಾರೇತರ ಸಂಸ್ಥೆಗಳು ಸಂತ್ರಸ್ತರ ನೆರವಿಗೆ ಧಾವಿಸಿದೆ ಎಂದು ನೀಲಮಣಿ ರಾಜು ಅವರು ತಿಳಿಸಿದರು.

ಭೂಮಿ ಹಾಗೂ ಮನೆ ಇಲ್ಲದವರಿಗೆ ಉದ್ಯೋಗ ಕಲ್ಪಿಸಿ ಸಹಜ ಜೀವನಕ್ಕೆ ಬರಲು ಅಗತ್ಯ ನೆರವು ನೀಡಬೇಕಿದೆ ಎಂದು ಅವರು ಹೇಳಿದರು. ಪೊಲೀಸ್ ಇಲಾಖೆ ಯಿಂದ ಒಂದು ದಿನದ 5.84 ಕೋಟಿ ರೂ ಸಂಬಳವನ್ನು ಮುಖ್ಯಮಂತ್ರಿ ಯವರ ಪರಿಹಾರ ನಿಧಿಗೆ ಹೋಗಲಿದೆ ಎಂದು ಅವರು ಮಾಹಿತಿ ನೀಡಿದರು.

ಅಮ್ಮವ್ವ ಬೆಳ್ಯಪ್ಪ (79), ವೆಂಕಟರಮಣ ಲಕ್ಷ್ಮಣ (49), ಯಶ್‍ವಂತ್ (36) [ಕಾಟಗೇರಿ ಗ್ರಾಮ] ಪಿ.ಎ. ಮುತ್ತ ಎಂಬವರ ಮಗು 3 ತಿಂಗಳು [ಮುಕ್ಕೋಡ್ಲು ಗ್ರಾಮ], ಬಸಪ್ಪ ಮಾಧವ (56), ಮೋನಿಷಾ ಬಸಪ್ಪ (24) ಕುಡಿಯರ ಗೌರಮ್ಮ ಬಸಪ್ಪ (53) [ಮದೆ ಜೋಡುಪಾಲ ಗ್ರಾಮ], ಚಂದ್ರಾವತಿ ಗೋಪಾಲ (66), ಉಮೇಶ್ ರೈ ಗೋಪಾಲ {36} {ಹೆಮ್ಮೆತ್ತಾಳು ಗ್ರಾಮ], ಉಮ್ಮವ್ವ ಬಿದ್ದಪ್ಪ (76) [ಹೆಬ್ಬೆಟ್ಟಗೇರಿ ಗ್ರಾಮ] ಇವರು ಮೃತಪಟ್ಟಿರುತ್ತಾರೆ.

ಗಿಲ್ಬರ್ಟ್ ಮೆಡೋಂಸ (59) [ಕಾಟಗೇರಿ ಗ್ರಾಮ], ಚಂದ್ರಪ್ಪ ಉಕ್ರಪ್ಪ ಪೂಜಾರಿ (58) [ಹೆಬ್ಬೆಟ್ಟಗೇರಿ ಗ್ರಾಮ], ಹರೀಶ್ ಕುಮಾರ್ [42], [ಹೆಬ್ಬಾಲೆ ಗ್ರಾಮ], ಮುಕ್ಕಾಟಿರ ಸಾಬು ಉತ್ತಪ್ಪ [62], [ಮೂವತ್ತೋಕ್ಲು ಗ್ರಾಮ ಮಾದಾಪುರ], ಫ್ರಾಸ್ಸಿಸ್ ಮಾಂತೆರೊ [ಅಪ್ಪು] [47], [ಹದಗೇರಿ ಗ್ರಾಮ. ಸೋಮವಾರಪೇಟೆ], ಬಾಬು ಕೊರಗಪ್ಪ [56] [ಉದಯಗಿರಿ ಮಕ್ಕಂದೂರು ಗ್ರಾಮ], ಮಂಜುಳಾ ಸೋಮಣ್ಣ [15], [ಜೋಡುಪಾಲ ಗ್ರಾಮ], ಗಗನ್ ಗಣಪತಿ [07] [ಕಾಲೂರು ಗ್ರಾಮ] ಇವರುಗಳು ಕಾಣೆಯಾಗಿದ್ದಾರೆ.

ಮತ್ತೊಂದು ಶವ ಪತ್ತೆ:ಇಂದಿನ ಕಾರ್ಯಾಚರಣೆಯಲ್ಲಿ ಜೋಡು ಪಾಲದ ಸಮಾಧಿಯಾಗಿದ್ದ ಮೃತ ಬಸಪ್ಪ ಅವರ ಪತ್ನಿ ಗೌರಮ್ಮ (53) ಅವರ ಶವವು ಪತ್ತೆಯಾಗಿದೆ.