ಸಿದ್ದಾಪುರ, ಆ. 24: ಸಿದ್ದಾಪುರದ ಕೈರಳಿ ಸಮಾಜದ ವತಿಯಿಂದ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಸಾಮೂಹಿಕ ಓಣಂ ಹಬ್ಬವನ್ನು ಈ ಬಾರಿ ಆಚರಿಸದೆ ಪ್ರವಾಹ ಪೀಡಿತ ಪ್ರದೇಶಗಳಾದ ಸಿದ್ದಾಪುರದ ಕರಡಿಗೋಡು, ನೆಲ್ಯಹುದಿಕೇರಿಯ ಭಾಗದಲ್ಲಿರುವ ಕುಂಬಾರಗೊಂಡಿಯ ನದಿ ದಡದ ಸಂತ್ರಸ್ತರಿಗೆ ಓಣಂ ಹಬ್ಬದ ಪ್ರಯುಕ್ತ ಅಕ್ಕಿ ಹಾಗೂ ಇತರೆ ಧಾನ್ಯ ಗಳಿರುವ ಓಣಂ ಕಿಟ್ಟನ್ನು ಪ್ರತಿ ಮನೆಗಳಿಗೆ ಕೈರಳಿ ಸಮಾಜದ ವತಿಯಿಂದ ವಿತರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಕೈರಳಿ ಸಮಾಜದ ಸಮಿತಿಯ ಅಧ್ಯಕ್ಷ ವಿ.ಕೆ. ಲೋಕೇಶ್ ಈ ಬಾರಿ ಸುರಿದ ಮಹಾಮಳೆಯಿಂದಾಗಿ ಜಿಲ್ಲೆಯಲ್ಲಿ ಹಲವು ಮಂದಿ ಸಂಕಷ್ಟಕ್ಕೆ ಸಿಲುಕಿ ಮತ್ತು ಹಲವು ಮಂದಿಗೆ ಪ್ರಾಣಹಾನಿಯಾಗಿರುವ ಹಿನ್ನೆಲೆಯಿಂದಾಗಿ ಕೈರಳಿ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದ್ದ ಓಣಂ ಆಚರಣೆಯನ್ನು ಕೈಬಿಡಲಾಗಿದೆ. ಕೈರಳಿ ಸಮಾಜದ ವತಿಯಿಂದ ಸಂತ್ರಸ್ತರಿಗೆ ಅಕ್ಕಿ ಹಾಗೂ ಇತರ ಧಾನ್ಯಗಳನ್ನು ಒಳಗೊಂಡ ಓಣಂ ಕಿಟ್ಟನ್ನು ವಿತರಿಸಲಾಯಿತು ಎಂದರು.

ಕೈರಳಿ ಸಮಾಜದ ಉಪಾಧ್ಯಕ್ಷ ಮಣಿ ಮಾತನಾಡಿ ಸೌಹಾರ್ದ ಸಂಕೇತವಾದ ಓಣಂ ಹಬ್ಬವನ್ನು ಪ್ರವಾಹದಿಂದಾಗಿ ಆಚರಿಸದ ಹಿನ್ನೆಲೆಯಲ್ಲಿ ಎಲ್ಲಾ ಸಂತ್ರಸ್ತರ ಕುಟುಂಬಗಳಿಗೆ ಕೈರಳಿ ಸಮಾಜದ ವತಿಯಿಂದ ಆಹಾರಗಳನ್ನು ವಿತರಿಸುತ್ತಿದ್ದೇವೆ.ಈ ಬಾರಿ ಓಣಂ ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸುವ ಹಿನ್ನೆಲೆಯಲ್ಲಿ ಆಹಾರ ಧಾನ್ಯ ಗಳನ್ನು ವಿತರಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕೈರಳಿ ಸಮಾಜದ ಸಮಿತಿಯ ಪದಾಧಿಕಾರಿಗಳು ಮನೆ ಮನೆಗೆ ಕಾಲ್ನಡಿಗೆಯಲ್ಲಿ ತೆರಳಿ ಓಣಂ ಕಿಟ್ಟನ್ನು ನೀಡಿ ಮಾನವೀಯತೆ ಮೆರೆದರು. ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಸಬಾಸ್ಟಿನ್ ದೇವಸ್ಸಿ, ಓ.ಕೆ. ಶ್ರೀಧರನ್, ಎಂ.ಎ. ಆನಂದ, ಪ್ರಸಾದ್, ದಿಲೀಪ್, ಮನು, ಸುರೇಶ್, ಜೋಸೆಫ್ ಶ್ಯಾಂ, ಜಿಮ್ಮಿ ಸಿಕ್ವೇರಾ, ವಿಕ್ಕಿ, ದಯಾನಂದ, ಗಿರೀಶ್ ಇತರರು ಹಾಜರಿದ್ದರು.