ಗೋಣಿಕೊಪ್ಪಲು,ಆ.24: ಗೋಣಿಕೊಪ್ಪ ಸಮೀಪದ ಕೈಕೇರಿ ಗ್ರಾಮದ 82 ಪ್ರಾಯದ ಬೋಪಯ್ಯ ಅವರು ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. 24ರ ಸಂಜೆ 6.10ರ ಸಮಯದಲ್ಲಿ ಕೈಕೇರಿ ಕಳತ್ಮಾಡು ಜಂಕ್ಷನ್ ಬಳಿ ರಸ್ತೆ ದಾಟುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ. ಬೆಂಗಳೂರಿನಿಂದ ಕಣ್ಣನ್ನೂರಿನ ಪಯ್ಯವೂರ್ ಗ್ರಾಮಕ್ಕೆ ಓಣಂ ಹಬ್ಬಕ್ಕೆಂದು ತೆರಳುತ್ತಿದ್ದ ಬೈಕ್‍ನ ಚಾಲಕ ಹೆಬಿನ್ ಮ್ಯಾಥ್ಯೂ(25) (ಕೆ.ಎಲ್.59 ಡಿ.7759) ಡಿಕ್ಕಿಪಡಿಸಿದ್ದು, ಸ್ಥಳದಲ್ಲೇ ಬೋಪಯ್ಯ ಅವರ ತಲೆ ಭಾಗಕ್ಕೆ ತೀವ್ರ ಪೆಟ್ಟಾಗಿದೆ. ಕೂಡಲೇ ಗ್ರಾಮಸ್ಥರ ಸಹಾಯದಿಂದ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದುಕೊಂಡು ತೆರಳುತ್ತಿದ್ದ ಸಂದರ್ಭ ಬಿಳಿಕೆರೆ ಸಮೀಪ ಸಾವನ್ನಪ್ಪಿದ್ದಾರೆ. ನಂತರ ಗೋಣಿಕೊಪ್ಪಲುವಿನ ಆಸ್ಪತ್ರೆಗೆ ಮೃತದೇಹವನ್ನು ವಾಪಸ್ಸು ತರಲಾಯಿತು. ಇಲ್ಲಿನ ವೈದ್ಯರಾದ ಡಾ.ಗಣೇಶ್ ಕುಮಾರ್ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದರು.

ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಡಿಕ್ಕಿ ಪಡಿಸಿದ ಯುವಕನ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಮೃತ ವ್ಯಕ್ತಿ ಬೋಪಯ್ಯರವರು ಗೋಣಿಕೊಪ್ಪಲುವಿನ ಅಪ್ಪು ಆಂಡ್ ಸನ್ಸ್‍ನ ಮಾಲೀಕರಾಗಿ ಕಳೆದ 50 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದರು. ಮೃತರು ಪತ್ನಿ, 5 ಗಂಡು ಮಕ್ಕಳು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.