ಕುಶಾಲನಗರ, ಆ. 22: ಸುತ್ತೂರು ಮಠಾಧೀಶರಾದ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ ಬುಧವಾರ ಕುಶಾಲನಗರಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.
ಕೊಡಗು ಜಿಲ್ಲೆಯ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಲು ಆಗಮಿಸಿದ ಶ್ರೀಗಳನ್ನು ಕುಶಾಲನಗರ ಕೊಪ್ಪ ಕಾವೇರಿ ಪ್ರತಿಮೆ ಬಳಿ ಬರಮಾಡಿಕೊಳ್ಳಲಾಯಿತು.
ಮಡಿಕೇರಿ ತಾಲೂಕಿನ ಮುಕ್ಕೋಡ್ಲುವಿನ ಮೇಘತ್ತಾಳು ಗ್ರಾಮದಿಂದ ಸಂತ್ರಸ್ತರಾಗಿ ಕುಶಾಲನಗರದಲ್ಲಿ ನೆಲೆಕಂಡಿರುವ 13 ಕುಟುಂಬಗಳ ಸಂತ್ರಸ್ತರು ಸ್ವಾಮೀಜಿಗಳ ಬಳಿ ತಮ್ಮ ಅಳಲು ತೋಡಿಕೊಂಡರು. ಪ್ರವಾಹದಿಂದ 50 ಕ್ಕೂ ಅಧಿಕ ಎಕರೆ ಕೃಷಿ ಭೂಮಿ ಮಣ್ಣುಪಾಲಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದರಲ್ಲದೆ ಮುಂದಿನ ಭವಿಷ್ಯಕ್ಕೆ ಮಠದ ಮೂಲಕ ಸಹಕಾರ ನೀಡಬೇಕೆಂದು ಕೋರಿದರು. ಸಂತ್ರಸ್ತರ ಮನವಿಗೆ ಸ್ಪಂದಿಸಿದ ಸ್ವಾಮೀಜಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಮಠದ ವತಿಯಿಂದ ಕಲ್ಪಿಸಲಾಗುವದು. ಯಾವದೇ ರೀತಿಯ ಅನಾನುಕೂಲ ಉಂಟಾದಲ್ಲಿ ಕೂಡಲೆ ಮಠದ ಗಮನಕ್ಕೆ ತಂದಲ್ಲಿ ಅಗತ್ಯ ಪರಿಹಾರ ಕ್ರಮ ಕೈಗೊಳ್ಳಲಾಗುವದು ತಕ್ಷಣ ಸೋಮವಾರಪೇಟೆ ಸಮೀಪದ ಬೇಳೂರು ಮಠದಲ್ಲಿ ಆಶ್ರಯ ಕಲ್ಪಿಸಲಾಗುವದು ಎಂದರು.
ಈ ಸಂದರ್ಭ ವಿವಿಧ ಮಠಾಧೀಶರುಗಳಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಸದಾಶಿವ ಸ್ವಾಮೀಜಿ, ಮಹಾಂತ ಸ್ವಾಮೀಜಿ, ಮಲ್ಲೇಶ ಸ್ವಾಮೀಜಿ, ನಟರಾಜ ಸ್ವಾಮೀಜಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಮಹೇಶ್, ವೀರಶೈವ ಸಮಾಜ ಅಧ್ಯಕ್ಷ ಡಿ.ಬಿ.ಧರ್ಮಪ್ಪ, ಪ್ರಮುಖರಾದ ಹೆಚ್.ವಿ.ಶಿವಪ್ಪ, ಕಾಂತರಾಜು, ಮಹದೇವಪ್ಪ, ಹೆಚ್.ಎಂ. ಮಧುಸೂದನ್ ಮತ್ತಿತರರು ಇದ್ದರು.