ಸೋಮವಾರಪೇಟೆ, ಆ. 22: ಸೋಮವಾರಪೇಟೆ ವ್ಯಾಪ್ತಿಯಲ್ಲಿ ಹಲವಷ್ಟು ಮೈಕ್ರೋ ಫೈನಾನ್ಸ್‍ಗಳು ಮಹಿಳಾ ಸಂಘಟನೆಗಳಿಗೆ ಸಾಲ ನೀಡಿದ್ದು, ಇದೀಗ ಪ್ರವಾಹ ಪರಿಸ್ಥಿತಿಯಿಂದ ಸಾಲ ಕಟ್ಟಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಸಾಲ ವಸೂಲಾತಿಯನ್ನು ಕೆಲ ಸಮಯ ಮುಂದೂಡಬೇಕೆಂದು ಆಗ್ರಹಿಸಿರುವ ವಿವಿಧ ಸಂಘಟನೆಗಳು, ತಪ್ಪಿದಲ್ಲಿ ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿವೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭೋವಿ ಯುವ ವೇದಿಕೆ ಜಿಲ್ಲಾಧ್ಯಕ್ಷ ಸುಜಿತ್, ಹಲವಷ್ಟು ಮೈಕ್ರೋ ಫೈನಾನ್ಸ್‍ಗಳು ಮಹಿಳಾ ಸಂಘದ ಸದಸ್ಯರಿಗೆ ಸಾಲ ನೀಡಿದ್ದು, ಇದರಲ್ಲಿ ಶೇ. 90ರಷ್ಟು ಮಹಿಳೆಯರು ಕೂಲಿ ಕಾರ್ಮಿಕರಾಗಿದ್ದಾರೆ. ಇದೀಗ ಜಿಲ್ಲೆಯ ಪ್ರವಾಹಕ್ಕೆ ಕಾಫಿ ತೋಟಗಳೇ ಇಲ್ಲವಾಗಿದೆ. ತೋಟ ಮಾಲೀಕರೇ ಕಂಗಾಲಾಗಿದ್ದು, ಕೂಲಿ ಕೆಲಸ ಇಲ್ಲವಾಗಿದೆ. ಜನ ಬದುಕುವದೇ ದುಸ್ತರವಾಗಿರುವ ಈ ಸಂದರ್ಭದಲ್ಲೂ ಖಾಸಗಿ ಫೈನಾನ್ಸ್ ಸಂಸ್ಥೆಗಳು ಸಾಲ ವಸೂಲಾತಿ ಮಾಡುತ್ತಿರುವದು ಸರಿಯಲ್ಲ ಎಂದರು. ಸಾಲಕಟ್ಟುವಂತೆ ಒತ್ತಡ ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಸಂಬಂಧಿಸಿದ ಮೈಕ್ರೋ ಫೈನಾನ್ಸ್ ಕಾರಣವಾಗಲಿದೆ ಎಂದು ಗೋಷ್ಠಿಯಲ್ಲಿದ್ದ ಪ್ರಮೋದ್, ಆಟೋ ಚಾಲಕರ ಸಂಘದ ಅಧ್ಯಕ್ಷ ಮೋಹನ್ ಎಚ್ಚರಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೀಡಲಾಗಿರುವ ಸಾಲ ಮರುಪಾವತಿಯನ್ನು ಎರಡು ವಾರಗಳ ಕಾಲ ಮುಂದೂಡಲಾಗಿದೆ. ಇದೇ ರೀತಿ ಇತರ ಸಂಘಗಳೂ ಸಹ ಸಾಲ ಪಾವತಿಯನ್ನು ಮುಂದೂಡಬೇಕು ಎಂದು ಎಂ.ಎ. ರುಬೀನಾ ಆಗ್ರಹಿಸಿದರು. ಗೋಷ್ಠಿಯಲ್ಲಿ ಸುಜಿತ್ ಉಪಸ್ಥಿತರಿದ್ದರು.