ಮಡಿಕೇರಿ, ಆ.23: ಕೊಡಗಿನಲ್ಲಿ ಅತಿವೃಷ್ಟಿಯಿಂದಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದು, ಇದರ ಪರಿಣಾಮ ಜಿಲ್ಲೆಯ ಜನರು ಸಂಕಷ್ಟ ಅನುಭವಿಸಿದರು. ಇದನ್ನು ತಿಳಿದು ಸರ್ಕಾರದ ಜೊತೆಗೆ ಸರ್ಕಾರೇತರ ಸಂಸ್ಥೆಗಳಿಂದ ಆಹಾರ ಹಾಗೂ ಇತರೆ ಸಾಮಗ್ರಿಗಳು ಜಿಲ್ಲೆಗೆ ಹರಿದು ಬರುತ್ತಿವೆ.

ಈ ಸಂಬಂಧ ನಗರದ ಜಿಲ್ಲಾಡಳಿತ ಭವನ, ಎ.ಪಿ.ಎಂ.ಸಿ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಹಾಗೂ ಕುಶಾಲನಗರದ ಎ.ಪಿ.ಎಂ.ಸಿ ಗಳಲ್ಲಿ ಆಹಾರ ಮತ್ತು ಇತರ ಸಾಮಗ್ರಿಗಳನ್ನು ದಾಸ್ತಾನು ಮಾಡಲಾಗುತ್ತಿದೆ. ಈ ದಾಸ್ತಾನು ಮಾಡಿದ ಆಹಾರ ಹಾಗೂ ಇತರ ಸಾಮಗ್ರಿಗಳನ್ನು ಪರಿಹಾರ ಕೇಂದ್ರಗಳಿಗೆ ಮತ್ತು ಗ್ರಾಮ ಪಂಚಾಯಿತಿ ಮೂಲಕ ಸಂತ್ರಸ್ಥರಿಗೆ ಆಹಾರ ಸಾಮಗ್ರಿಗಳನ್ನು ಪೂರೈಕೆ ಮಾಡಲಾಗುತ್ತಿದೆ.

ಆದರೆ, ಕೆಲವು ಸಾಮಾಜಿಕ ಜಾಲ ತಾಣಗಳಲ್ಲಿ ಜಿಲ್ಲಾಡಳಿತಕ್ಕೆ ಪೂರೈಕೆಯಾಗುವ ಆಹಾರ ಹಾಗೂ ಇತರೆ ಸಾಮಗ್ರಿಗಳನ್ನು ದುರುಪಯೋಗ ಮಾಡುತ್ತಿದ್ದಾರೆ ಎಂಬ ವದಂತಿಯ ಮಾಹಿತಿಯನ್ನು ಹರಿಬಿಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದುದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಇಂತಹ ವದಂತಿಗಳನ್ನು ಹಾಕುವವರ ವಿರುದ್ಧ ಕ್ರಮಕೈಗೊಳ್ಳಲು ಈಗಾಗಲೇ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.