ಕುಶಾಲನಗರ, ಆ. 23: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಶಾಲನಗರಕ್ಕೆ ಭೇಟಿ ನೀಡಿ ನೆರೆಯಿಂದ ಮನೆ ಕಳೆದಕೊಂಡ ಸಂತ್ರಸ್ತರನ್ನು ಭೇಟಿ ಮಾಡಿದರು. ಕುಶಾಲನಗರದ ದಂಡಿನಪೇಟೆಯಲ್ಲಿ ಕಾವೇರಿ ನದಿ ನೀರು ಉಕ್ಕಿ ಸೂರು ಕಳೆದುಕೊಂಡ ಪ್ರದೇಶಗಳಿಗೆ ಭೇಟಿ ನೀಡಿ ಸಿದ್ದರಾಮಯ್ಯ ಸಂತ್ರಸ್ತರ ಅಳಲನ್ನು ಆಲಿಸಿದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವ ಎ. ಮಂಜು ಮತ್ತಿತರರೊಂದಿಗೆ ಆಗಮಿಸಿದ ಸಿದ್ದರಾಮಯ್ಯ ಪ್ರವಾಹಕ್ಕೆ ಶಿಥಿಲಗೊಂಡು ನೆಲಕ್ಕುರುಳಿದ ಮನೆಗಳು ಮತ್ತು ಭಾಗಶಃ ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ ವೀಕ್ಷಿಸಿದರು.

ಮಳೆಯಿಂದ ಇದ್ದ ಒಂದು ಸೂರು ನೆಲಕಚ್ಚಿದೆ. ಮುಂದಿನ ಜೀವನ ಚಿಂತಾಜನಕವಾಗಿದ್ದು, ಆದಷ್ಟು ಬೇಗ ಸೂರು ಕಲ್ಪಿಸುವಂತೆ ಬಡಾವಣೆ ನಿವಾಸಿಗಳು ಕೋರಿಕೊಂಡರು. ಸ್ಥಳದಲ್ಲಿದ್ದ ಅಧಿಕಾರಿಗಳ ಬಳಿ ಮಾಹಿತಿ ಪಡೆದುಕೊಂಡ ಸಿದ್ದರಾಮಯ್ಯ ಅಗತ್ಯ ಸ್ಥಳ ಗುರುತಿಸಿ ನಿವೇಶನ ಒದಗಿಸಲು ಸೂಚಿಸಿದರು. ನದಿ ಪಾತ್ರದಲ್ಲಿ ಮನೆಗಳ ಮರು ನಿರ್ಮಾಣ ವಿಚಾರದ ಬಗ್ಗೆ ಪರಿಶೀಲಿಸುವದು ಅಥವಾ ಸಂತ್ರಸ್ತರನ್ನು ಬೇರೆಡೆಗೆ ಸ್ಥಳಾಂತರಿಸಿ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

ನಂತರ ಮಡಿಕೇರಿಗೆ ತೆರಳುವ ಮಾರ್ಗ ಮಧ್ಯೆ ಬಸವನಹಳ್ಳಿ ಗಿರಿಜನರ ಪುನರ್ವಸತಿ ಕೇಂದ್ರಕ್ಕೆ ಭೇಟಿ ಶಿಬಿರದಲ್ಲಿ ನಿರ್ಮಾಣಗೊಂಡಿರುವ ಮನೆಗಳ ಪರಿಶೀಲನೆ ನಡೆಸಿದರು. ಸ್ಥಳೀಯ ನಿವಾಸಿಗಳು ಮೂಲಭೂತ ಸೌಲಭ್ಯದ ಕೊರತೆ ಬಗ್ಗೆ ತಿಳಿಸಿದ ಸಂದರ್ಭ ಸಂಬಂಧಿಸಿದ ಅಧಿಕಾರಿಗಳಿಗೆ ಕೂಡಲೇ ಸಮರ್ಪಕ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ತಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭ ದಿಡ್ಡಳ್ಳಿ ನಿರಾಶ್ರಿತರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಸಾಧ್ಯವಾಯಿತು. ಪುನರ್ವಸತಿ ಕೇಂದ್ರದ ಉದ್ಘಾಟನೆಗೆ ಆಗಮಿಸಲು ಸಾಧ್ಯವಾಗಿಲ್ಲ. ಆ ಹಿನ್ನೆಲೆಯಲ್ಲಿ ಶಿಬಿರಕ್ಕೆ ಭೇಟಿ ನೀಡಿದ್ದೇನೆ ಎಂದರು.

ಕುಶಾಲನಗರದ ನೆರೆಪೀಡಿತ ಪ್ರದೇಶಗಳಿಗೆ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.