ಕೂಡಿಗೆ, ಆ. 23: ಸಮೀಪದ ಕೂಡುಮಂಗಳೂರು ನವಗ್ರಾಮದ ಗುಡ್ಡದಲ್ಲಿ ಕೆಲವು ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಮನೆಗಳ ಹಿಂಬದಿಗೆ ಗುಡ್ಡ ಕುಸಿಯುತ್ತಿದೆ. ಈಗಾಗಲೇ ಚಂದನ್, ಚೋಂದಮ್ಮ, ಯಶೋಧ ಎಂಬವರ ಮನೆಗಳ ಹಿಂಭಾಗದಲ್ಲಿ ಗುಡ್ಡ ಕುಸಿದಿದೆ. ಕಳೆದ ವಾರ ಭಾರಿ ಮಳೆ ಬಿದ್ದ ಪರಿಣಾಮ ಗುಡ್ಡದ ಸಮೀಪದಲ್ಲಿದ್ದ ನಿವಾಸಿಗಳು ಮನೆಯನ್ನು ಖಾಲಿ ಮಾಡಿ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು. ಇಂದು ಮನೆಗೆ ಬಂದ ನಂತರ ಮನೆಯ ಹಿಂಭಾಗದಲ್ಲಿ ಗುಡ್ಡ ಕುಸಿಯುವದು ಹೆಚ್ಚಾಗಿದೆ. ಅಲ್ಲದೆ, ನವಗ್ರಾಮದ ರೇಖಾ ಎಂಬವರ ಮನೆಯೊಳಗೆ ನೀರು ಉಕ್ಕುತ್ತಿದ್ದು, ಇನ್ನೂ ಕೆಲವು ಮನೆಗಳೊಳಗೆ ನೀರು ಉಕ್ಕಿ ಬರುತ್ತಿದೆ. ಗುಡ್ಡ ಸಮೀಪದ ನಿವಾಸಿಗಳು ಆತಂಕದಲ್ಲಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮಲೆಕ್ಕಿಗ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯೆಷಾ ಭೇಟಿ ನೀಡಿ ಪರಿಶೀಲಿಸಿದ್ದಾರೆ.