ಸೋಮವಾರಪೇಟೆ, ಆ. 22: ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಾಧನೆಗಳು ಹಾಗೂ ಕಾರ್ಯಕ್ರಮಗಳನ್ನು ಸಮಾಜದ ಗಣ್ಯ ವ್ಯಕ್ತಿಗಳಿಗೆ ತಿಳಿಸುವ ಉದ್ದೇಶದಿಂದ ಭಾರತೀಯ ಜನತಾ ಪಾರ್ಟಿ ಸಮರ್ಥನೆಗಾಗಿ ಸಂಪರ್ಕ ಅಭಿಯಾನವನ್ನು ಪ್ರಾರಂಭಿಸಿದ್ದು, ಅದರಂತೆ ಸೋಮವಾರಪೇಟೆ ತಾಲೂಕು ಬಿಜೆಪಿ ಯುವ ಮೋರ್ಚಾದಿಂದ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಸೋಮವಾರಪೇಟೆ ರೋಟರಿ ಸಂಸ್ಥೆಯ ಅಧ್ಯಕ್ಷ ಹಾಗೂ ಗಜಾನನ ಗ್ಯಾಸ್ ಸರ್ವಿಸ್‍ನ ಮಾಲೀಕ ಪಿ. ಕೆ. ರವಿ, ಭಾರತಿ ಸ್ಟೋರ್ಸ್‍ನ ಮಾಲೀಕ ಸೀತಾರಾಂ ಅವರುಗಳಿಗೆ, ಕೇಂದ್ರ ಸರ್ಕಾರದ ಸಾಧನೆಗಳನ್ನು ಬಿಂಬಿಸುವ ಕಿರುಹೊತ್ತಿಗೆಯನ್ನು ನೀಡಿ, ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಬಿಜೆಪಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಸುನಿಲ್, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಮನುಕುಮಾರ್ ರೈ, ಯುವ ಮೋರ್ಚಾ ಕಾರ್ಯದರ್ಶಿ ಶರತ್ ಚಂದ್ರ, ಉಪಾಧ್ಯಕ್ಷ ಪ್ರಸನ್ನ ನಾಯರ್, ಖಜಾಂಚಿ ಪ್ರಜಾ ಪೂಣಚ್ಚ, ಕಾರ್ಯದರ್ಶಿ ಪ್ರವೀಣ್, ಜಿಲ್ಲಾ ಸಮಿತಿಯ ಪಿ. ಮಧು, ತಾಲೂಕು ಸಮಿತಿಯ ಸಾಗರ್, ಮುರಳಿ, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ನಳಿನಿ ಗಣೇಶ್ ಸೇರಿದಂತೆ ಇತರರು ಅಭಿಯಾನದಲ್ಲಿ ಭಾಗವಹಿಸಿದ್ದರು.