ಮಡಿಕೇರಿ, ಆ. 22: ಜಿಲ್ಲೆಯ ಮುಸ್ಲಿಂ ಬಾಂಧವರು ಇಂದು ಬಕ್ರೀದ್ ಹಬ್ಬವನ್ನು ಸಡಗರ ರಹಿತವಾಗಿ ಪ್ರಾರ್ಥನೆ ಹಾಗೂ ಆರಾಧನೆಗಳಿಗೆ ಸೀಮಿತಗೊಳಿಸಿ ತಮ್ಮ ಪಾಲಿನ ಕಾಣಿಕೆಯನ್ನು ಸಂತ್ರಸ್ತರ ನಿಧಿಗೆ ನೀಡುವ ಮೂಲಕ ಸರಳವಾಗಿ ಆಚರಿಸಿದರು.

ಹಬ್ಬದ ಅಂಗವಾಗಿ ಎಲ್ಲಾ ಮಸೀದಿಗಳಲ್ಲೂ ಇಂದು ಬೆಳಿಗ್ಗೆ ಧರ್ಮೋಪದೇಶದೊಂದಿಗೆ ಅತಿವೃಷ್ಟಿಗೆ ಸಿಲುಕಿಕೊಂಡವರಿಗೆ ನೆರವಾಗುವದರ ಮಹತ್ವದ ಕುರಿತು ಧರ್ಮ ಗುರುಗಳು ಪ್ರವಚನ ನೀಡಿದರು.

ಮಡಿಕೇರಿ ಎಂ.ಎಂ. ಮಸೀದಿಯಲ್ಲಿ ನಡೆದ ಹಬ್ಬದ ವಿಶೇಷ ನಮಾಝ್‍ನ ನೇತೃತ್ವ ವಹಿಸಿ ಮಾತನಾಡಿದ ಧರ್ಮಗುರು ಅಬ್ದುಲ್ ಹಮೀದ್ ಮದನಿ, ಕೊಡಗು ಜಿಲ್ಲೆ ಹಿಂದೆಂದೂ ಕಂಡು ಕೇಳರಿಯದ ಅನಾಹುತಕ್ಕೆ ಸಿಲುಕಿಕೊಂಡಿದ್ದು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ಮುಸ್ಲಿಮನೂ ಜಾತಿ- ಭೇದ ನೋಡದೆ ಸಂಕಷ್ಟಕ್ಕೆ ಸಿಲುಕಿದವರಿಗೆ ಕೈಲಾದ ಸಹಾಯ ನೀಡಬೇಕು ಎಂದು ಸಮುದಾಯ ಬಾಂಧವರಿಗೆ ಕರೆ ನೀಡಿದರು.

ಮಡಿಕೇರಿಯ ಬದ್ರಿಯಾ, ಜಾಮಿಯಾ, ಭಟ್ಕಳ್, ಮಕ್ಕಾ ಮದೀನ, ಲಷ್ಕರ್ ಮಸ್ಜಿದುರ್ರಹ್ಮಾ ಸಲಫಿ ಹಾಗೂ ಅಹ್ಮದೀಯ ಮಸೀದಿಗಳಲ್ಲಿ ಹಬ್ಬದ ವಿಶೇಷ ನಮಾಝ್ ನಡೆದು ಸಂತ್ರಸ್ತರ ಭವ್ಯ ಬದುಕಿಗಾಗಿ ಪ್ರಾರ್ಥಿಸಲಾಯಿತು. ಧರ್ಮಗುರುಗಳಾದ ಉಮ್ಮರ್ ಸಖಾಫಿ, ಅಬ್ದುಲ್ ಹಕೀಂ, ಉಮರ್ ಮೌಲವಿ, ಮಹಮದ್ ಅಸ್ಲಾಂ, ಇಸಾಕ್ ಅಹಮದ್, ಮುಹಮ್ಮದ್ ಖಯ್ಯೂಮ್, ಮಹಮದಾಲಿ ಲತೀಫಿ ಮುಂತಾದವರು ಹಬ್ಬದ ನಮಾಝ್‍ಗೆ ನೇತೃತ್ವ ವಹಿಸಿದ್ದರು.

ಜಿಲ್ಲೆಯ ವಿವಿಧೆಡೆ ಹಬ್ಬದ ಪ್ರಯುಕ್ತ ಹಲವರು ಕುರಿ - ಮೇಕೆಗಳ ಬಲಿದಾನ ನಡೆಸಿ ಬಡ ಬಗ್ಗರಿಗೆ ಮಾಂಸದಾನ ಮಾಡಿದರು. ವೀರಾಜಪೇಟೆ, ಸೋಮವಾರಪೇಟೆ, ಕುಶಾಲನಗರ, ಕೊಂಡಂಗೇರಿ, ಎಮ್ಮೆಮಾಡು, ನಾಪೋಕ್ಲು ಸೇರಿದಂತೆ ಎಲ್ಲಾ ಮಸೀದಿಗಳಲ್ಲೂ ಸಂತ್ರಸ್ತರ ಒಳಿತಿಗಾಗಿ ವಿಶೇಷ ಪ್ರಾರ್ಥನೆ ನಡೆಸಲಾಯಿತು.

ಸೋಮವಾರಪೇಟೆ : ಸೋಮವಾರಪೇಟೆ ವ್ಯಾಪ್ತಿಯಲ್ಲಿ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಸರಳವಾಗಿ ಆಚರಿಸಿದರು. ಪ್ರಾರ್ಥನಾ ಮಂದಿರದಲ್ಲಿ ಸೇರಿದ ಮುಸ್ಲಿಂ ಬಾಂಧವರು ಕೊಡಗಿನ ಪ್ರವಾಹ ಪರಿಸ್ಥಿತಿ ದೂರಾಗಲಿ ಎಂದು ಪ್ರಾರ್ಥಿಸಿ, ಸರಳವಾಗಿ ಹಬ್ಬವನ್ನು ಆಚರಿಸಿದರು.

ನಂತರ ಖಬರಸ್ಥಾನಗಳಿಗೆ ತೆರಳಿ ಅಗಲಿದವರ ಆತ್ಮಕ್ಕೆ ಶಾಂತಿಕೋರಿ ಪ್ರಾರ್ಥನೆ ಸಲ್ಲಿಸಿದರು.

ಸುಂಟಿಕೊಪ್ಪ : ಮುಸ್ಲಿಂ ಬಾಂಧವರು ಪವಿತ್ರ ಬಕ್ರೀದ್ ಹಬ್ಬದ ಅಂಗವಾಗಿ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು.

ಪಟ್ಟಣದಲ್ಲಿರುವ ಸುನ್ನಿ ಶಾಫಿ ಜುಮ್ಮ ಮಸೀದಿ ಹನಫಿ ಜಮಾಯತ್, ಸು&divound;್ನ ಮುಸ್ಲಿಂ ಜಮಾಯತ್, ಗದ್ದೆಹಳ್ಳ ನೂರೂಲ್ಲಾ ಇಸ್ಲಾಂ ಜಮಾಯತ್‍ಗಳಲ್ಲಿ ಜಮಾವಣೆ ಗೊಂಡ ಮುಸ್ಲಿಂ ಬಾಂಧÀವರು ಖತ್ತೀಜ ಉಮ್ಮ ಮದರಸ ಹಾಗೂ ವಿವಿಧ ಕೇಂದ್ರಗಳಲ್ಲಿ ಇರುವ &divound;ರಾಶ್ರಿತ ಸಂತ್ರಸ್ತರೊಂದಿಗೆ ಬಕ್ರೀದ್ ಹಬ್ಬವನ್ನು ಆಚರಿಸಿಕೊಂಡರು. ಈ ಬಾರಿಯ ವಿಶೇಷತೆಗೆ ನಾಂದಿಹಾಡಿದ್ದಾರೆ.

ವೀರಾಜಪೇಟೆ: ವೀರಾಜಪೇಟೆ ನಗರದ ವಿವಿಧ ಮಸೀದಿಗಳಲ್ಲಿ ವಿಶೇಷ ಈದ್ ನಮಾಝ್ ಮತ್ತು ಪ್ರವಚನ ನಡೆಯಿತು. ನಗರದ ಮುಖ್ಯ ಬೀದಿಯಲ್ಲಿರುವ ಶಾಫಿ ಜುಮಾ ಮಸೀದಿಯಲ್ಲಿ ಮೌ|| ಹಂಝಾ ಮೌಲವಿ ಇರ್ಫಾನಿ, ಖಾಸಗಿ ಬಸ್ಸು ನಿಲ್ದಾಣದಲ್ಲಿನ ಶಾದುಲಿ ಜುಮಾ ಮಸೀದಿಯಲ್ಲಿ ನೌಷಾದ್ ದಾರಿಮಿ, ಗೋಣಿಕೊಪ್ಪ ರಸ್ತೆಯ ವಿದ್ಯಾನಗರದ ಇಮಾಂ ಮುಸ್ಲಿಮ್ ಜುಮಾ ಮಸೀದಿಯಲ್ಲಿ ಮುಹ್‍ಸಿನ್ ಇರಿಕ್ಕೂರ್, ಬಂಗಾಳಿ ಬೀದಿಯ ಮಸ್ಜಿದ್-ಎ-ಅಝಂನಲ್ಲಿ ಮೌ|ಸಿರಾಜುದ್ದೀನ್, ಅಪ್ಪಯ್ಯಸ್ವಾಮಿ ರಸ್ತೆಯ ಜಾಮಿಯಾ ಮಸೀದಿಯಲ್ಲಿ ಮೌ| ಗುಲ್‍ಷದ್, ಕ್ಲಾಕ್ ಟವರ್ ಸಮೀಪದ ಬಾದ್‍ಶಾ ಮಸೀದಿಯಲ್ಲಿ ಮೌ|| ಮಖ್‍ಸೂದ್, ಸುಣ್ಣದಬೀದಿಯ ಮದೀನಾ ಮಸೀದಿಯಲ್ಲಿ ಮೌ|| ಮುಝಮ್ಮಿಲ್, ಮಲಬಾರ್ ರಸ್ತೆಯ ಸಲಫಿ ಜುಮಾ ಮಸೀದಿಯಲ್ಲಿ ಮುನೀರ್ ಶರಫಿ ವಿಶೇಷ ಪ್ರಾರ್ಥನೆ ಹಾಗೂ ಪ್ರವಚನಕ್ಕೆ ನೇತೃತ್ವ ವಹಿಸಿದ್ದರು.

ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪದಲ್ಲಿ ಸಂಕಷ್ಟ ಅನುಭವಿಸುತ್ತಿರುವವರಿಗಾಗಿ ಎಲ್ಲಾ ಮಸೀದಿಗಳಲ್ಲಿ ಪ್ರವಚನ ಸಮಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಸಂಕಷ್ಟ ಪೀಡಿತರ ನೆರವಿಗಾಗಿ ಹಣ ಸಂಗ್ರಹಣೆ ಮಾಡಲಾಯಿತು. ಹನಫಿ ಮುಸಲ್ಮಾನರು ಪ್ರತಿವರ್ಷ ಹಬ್ಬಾಚರಣೆ ಅಂಗವಾಗಿ ನಡೆಸುವ ಮೆರವಣಿಗೆಯನ್ನು ರದ್ದುಪಡಿಸಿದರು.