ಕುಶಾಲನಗರ, ಆ. 22: ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಕುಶಾಲನಗರ - ಸಂಪಾಜೆ ವ್ಯಾಪ್ತಿಯ ರಸ್ತೆ ಸಂಪೂರ್ಣ ಹಾನಿ ಯಾಗುವದರೊಂದಿಗೆ ಕುಶಾಲನಗರ ಕೊಪ್ಪ ಬಳಿ ಕೊಡಗು-ಮೈಸೂರು ಸಂಪರ್ಕ ಕಲ್ಪಿಸುವ ಕಾವೇರಿ ನದಿಯ ನೂತನ ಸೇತುವೆ ಬಿರುಕು ಬಿಟ್ಟಿರುವದು ಕಂಡುಬಂದಿದೆ.ಕಾವೇರಿ ನದಿಯಲ್ಲಿ ಹರಿದು ಬಂದ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ಸಂದರ್ಭ ನೀರಿನ ರಭಸಕ್ಕೆ ಸೇತುವೆಯ ಬಲಪಾಶ್ರ್ವ ಅಲ್ಪಸ್ವಲ್ಪ ಕುಸಿದಿದ್ದು ಅಪಾಯವನ್ನು ಆಹ್ವಾನಿಸುವಂತಿದೆ. ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಮೂಲಕ 2002ರಲ್ಲಿ ನಿರ್ಮಾಣಗೊಂಡ ಸೇತುವೆ ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯ (ಮೊದಲ ಪುಟದಿಂದ) 88.3 ಕಿಮೀ ವ್ಯಾಪ್ತಿಯಲ್ಲಿದ್ದು ಈ ಮೂಲಕ ಭಾರೀ ಪ್ರಮಾಣದ ಭಾರ ಹೊತ್ತ ವಾಹನಗಳು ದಿನರಾತ್ರಿ ಸಂಚರಿಸುತ್ತಿವೆ. 20 ಮೀ ಉದ್ದದ 6 ಕಮಾನುಗಳನ್ನು ಸೇತುವೆಗೆ ಅಳವಡಿಸಲಾಗಿದ್ದು ಈ ಬಾರಿ ಗರಿಷ್ಠ ನೀರು ಹರಿದ ಹಿನ್ನಲೆಯಲ್ಲಿ ರಸ್ತೆ ಬದಿಯ ತಡೆಗೋಡೆ ಕುಸಿದಿರುವ ದೃಶ್ಯ ಗೋಚರಿಸಿದೆ. ಇದರೊಂದಿಗೆ ಸೇತುವೆಯ ತುದಿ ಭಾಗದ ಕಮಾನು ವ್ಯಾಪ್ತಿಯಲ್ಲಿ ಕೆಲವೇ ಅಂತರದಲ್ಲಿ ತಡೆಗೋಡೆ ಕುಸಿದು ಮುಂದಿನ ದಿನಗಳಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಅಧಿಕವಾಗಿದೆ ಎನ್ನುವದು ಪ್ರಯಾಣಿಕರ ಆತಂಕವಾಗಿದೆ. ಇನ್ನೊಂದೆಡೆ ಕಾವೇರಿ ಪ್ರತಿಮೆ ಬಳಿ ನದಿಗೆ ನಿರ್ಮಾಣಗೊಂಡ ಮೆಟ್ಟಿಲುಗಳ ಬಳಿ ಪುರಾತನ ಸೇತುವೆ ತಡೆಗೋಡೆಯಲ್ಲಿ ಕೂಡ ಬಿರುಕು ಕಂಡುಬಂದಿದೆ. ಕಳೆದ 6 ತಿಂಗಳಿನಿಂದ ಮೈಸೂರು-ಮಡಿಕೇರಿ ರಸ್ತೆ ಮೂಲಕ 40 ಟನ್‍ಗಿಂತಲೂ ಅಧಿಕ ಭಾರ ಹೊತ್ತ ವಾಹನಗಳು ಸಂಚರಿಸುತ್ತಿದ್ದು ಹೆದ್ದಾರಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದೀಗ ಶಿರಾಡಿಘಾಟ್ ರಸ್ತೆ ಮತ್ತೆ ಬಂದ್ ಆಗಿದ್ದು ಈ ಮೂಲಕ ಸಂಚಾರ ವ್ಯವಸ್ಥೆಗೆ ಇನ್ನೂ ಹೆಚ್ಚಿನ ಒತ್ತಡ ದೊರೆಯಲಿದೆ.
ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ಮುಂದೆ ಉಂಟಾಗಲಿರುವ ಅನಾಹುತವನ್ನು ತಪ್ಪಿಸಬೇಕಾಗಿದೆ.