ಕರಾಳ ರಾತ್ರಿ ಕಂಡ ಮದೆ, ಮೊಣ್ಣಂಗೇರಿ, ಕಾಟಕೇರಿ, ಉಡೋತ್‍ಮೊಟ್ಟೆ, ಜೋಡುಪಾಲ, ಹೆರವನಾಡು ಹಾಗೂ ಇತರೆಡೆಗಳ ಸುಮಾರು ಆರುನೂರು ನಿರಾಶ್ರಿತರಿಗೆ ಚೇರಂಬಾಣೆಯ ಅರುಣಾ ಜೂನಿಯರ್ ಕಾಲೇಜು ಆಶ್ರಯ ತಾಣವಾಗಿದೆ.

ಹಾಲುಣಿಸುವ ಮಗುವಿನಿಂದ ವಯಸ್ಸಾದವರು ಕೂಡಾ ಇಲ್ಲಿ ಆತಂಕದ ಕ್ಷಣ ಮರೆಯಲು ಯತ್ನಿಸುತ್ತಿದ್ದು, ಚೇರಂಬಾಣೆಯ ಎಲ್ಲ ವರ್ಗದ ಜನ, ಎಲ್ಲ ಸಂಘ ಸಂಸ್ಥೆಗಳೂ ನಿಸ್ವಾರ್ಥ ಸೇವೆಯಲ್ಲಿ ತೊಡಗಿದ್ದಾರೆ.

ಚೇರಂಬಾಣೆ ಕೊಡವ ಸಮಾಜದಲ್ಲಿ ಮಹಿಳೆಯರು ಸಾಮಗ್ರಿಗಳ ಸಂಗ್ರಹಣೆ ಮತ್ತು ವಿತರಣೆಯನ್ನು ನಿರಂತರ ಮಾಡುತ್ತಿದ್ದು, ಅಚ್ಚುಕಟ್ಟಾದ ಅಡುಗೆ ಅಲ್ಲಿಯೇ ತಯಾರಿಸಿ ಹಂಚಲಾಗು ತ್ತಿದೆ. ಜಿಲ್ಲಾ ಆಡಳಿತದ ಅಡುಗೆಯವ ರೊಂದಿಗೆ ಇಂದಿನಿಂದ ಇಸ್ಕಾನಿನ ಅಡುಗೆಯವರೂ ಕೈ ಜೋಡಿಸಲಿ ದ್ದಾರೆ. ಕೊಡವ ಸಮಾಜದ ಅಧ್ಯಕ್ಷ ಕುಟ್ಟೇಟಿರ ಮಣಿ ಕುಂಞಪ್ಪ, ಅರುಣಾ ಜೂನಿಯರ್ ಕಾಲೇಜು ಅಧ್ಯಕ್ಷ ಪಿ.ಎಸ್. ಸುಬ್ಬಯ್ಯ ಅವರೊಂದಿಗೆ ಹೇಮ ಮಾದಪ್ಪ ಹಾಗೂ ಇತರ ಹತ್ತಾರು ಮಂದಿ ನಿರಂತರ ಸೇವೆಯಲ್ಲಿ ತೊಡಗಿದ್ದಾರೆ. ಕಾಲೇಜಿನ ನಾಲ್ಕು ಕೋಣೆಯಲ್ಲಿ ಸಂತ್ರಸ್ತರು ನೆಲೆನಿಂತಿದ್ದಾರೆ. ಈ ನಡುವೆ ಜಿಲ್ಲಾ ವೈದ್ಯಕೀಯ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ, ಅಶ್ವಿನಿ ಆಸ್ಪತ್ರೆಯ ಟ್ರಸ್ಟಿ ಮಂಡೀರ ದೇವಿ ಪೂಣಚ್ಚ ಇವರುಗಳು ಬೆಂಗಳೂರಿನಿಂದ ಕರೆಸಿದ ವೈದ್ಯಕೀಯ ತಂಡದಿಂದ ಸಂತ್ರಸ್ತರ ಆರೋಗ್ಯ ತಪಾಸಣೆ ನಡೆಸಿದ್ದಾರೆ.ಇಂದಿನ ಬಿಸಿಲಿನ ನಡುವೆ ಚಿಣ್ಣರು ಹರ್ಷದಿಂದ ಆಟವಾಡುತ್ತಾ ಹಿರಿಯರ ನೋವನ್ನು ಮರೆ ಮಾಡಿದಂತೆ ಭಾಸವಾಯಿತು.

ಸಾಲು ಸಾಲು ಕಾರ್ಮಿಕರು : ಬೇರೆ ಬೇರೆ ಕಡೆಗಳಿಂದ ಹರಿದು ಬರುತ್ತಿರುವ ಸೌಲಭ್ಯ ಅನೇಕ ಕಡೆ ದಾಸ್ತಾನುಗೊಳ್ಳುತ್ತಾ ವ್ಯರ್ಥವೆನಿಸತೊಡಗಿದ್ದರೆ, ಕೆಲವಷ್ಟು ದಾನಿಗಳು ಗ್ರಾಮ ಗ್ರಾಮಗಳಿಗೆ ಆಹಾರ ವಸ್ತುಗಳ ಪೂರೈಕೆಯಲ್ಲಿ ತೊಡಗಿರುವ ದೃಶ್ಯ ಗೋಚರಿಸಿತು. ಈ ಅವಕಾಶಕ್ಕಾಗಿ ಅಲ್ಲಲ್ಲಿ ರಸ್ತೆ ಬದಿ ದುಡಿಯುವ ಕಾರ್ಮಿಕರು ತೋಟಗಳಿಂದ ಹೊರ ಬಂದು ಅಗತ್ಯ ವಸ್ತು ಪಡೆಯುತ್ತಾ, ಹರಿದು ಬರುವ ನೆರವಿನ ವಾಹನಗಳಿಗಾಗಿ ನಿಂತಿದ್ದ ದೃಶ್ಯ ಕಣ್ಣಿಗೆ ಎದುರಾಯಿತು.

ಮಡಿಕೇರಿ ಸೇರಿದಂತೆ ಕೆಲವೆಡೆ ಅವಕಾಶವಾದಿಗಳು ತಮ್ಮ ತಮ್ಮ ವಾಹನಗಳಲ್ಲಿ ದಾನಿಗಳ ನೆರವನ್ನು ನೊಂದ ಜನತೆಗೆ ತಲಪಿಸುವ ನೆಪದಲ್ಲಿ ತುಂಬಿಸಿಕೊಂಡು ಹೋಗಿ ಅಂಗಡಿಗಳಿಗೆ ಮಾರಾಟಗೊಳಿಸುವದು ಸೇರಿದಂತೆ, ಕಾಳಸಂತೆಕೋರರು ತಮ್ಮ ತಮ್ಮ ಮಳಿಗೆ, ಹೋಂ ಸ್ಟೇಗಳ ಲೆಕ್ಕದಲ್ಲಿ ದೋಚಿರುವ ದೂರುಗಳಿವೆ.

ಒಂದೆಡೆ ಕೊಡಗಿನ ಬಹು ಮಂದಿ ಅತಿವೃಷ್ಟಿಯಿಂದ ತತ್ತರಿಸಿ ತುತ್ತು ಅನ್ನ ನಿರಾಕರಿಸುತ್ತಾ, ಭವಿಷ್ಯದ ಸೂರಿಗಾಗಿ ಕಣ್ಣೀರುಗರೆದರೆ, ಇದೇ ಅವಕಾಶವನ್ನು ಬಂಡವಾಳ ಮಾಡಿಕೊಂಡಿರುವ ಮಂದಿ ಮಾನವೀಯತೆ ಮರೆತು ದೋಚುತ್ತಿರುವ ಸಾಮಾನ್ಯ ದೃಶ್ಯ ಎದುರಾಗುತ್ತಿದೆ.

ಜಾತಿಯ ಲೇಪವಿಲ್ಲದೆ ಯುವ ಜನರು, ಮಹಿಳೆಯರು ಸಹಿತ ಎಲ್ಲ ವರ್ಗ ಸೇವೆಗೆ ಮುಂದಾಗಿದ್ದರೆ, ಸೇವೆಯ ಸೋಗಿನಲ್ಲಿ ಲೂಟಿಕೋರರು ಕೂಡ ಕಾರ್ಯೋನ್ಮುಖವಾಗಿದ್ದು, ಈ ಬಗ್ಗೆ ಸಂಬಂಧಿಸಿದವರು ಮುನ್ನೆಚ್ಚರಿಕೆ ವಹಿಸಬೇಕಿದೆ. - ಶ್ರೀಸುತ